ರಾಜನಾಥ್ ಸಿಂಗ್
ದೇಶ
ಪ್ಯಾರಾಮಿಲಿಟರಿಯ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 1 ಕೋಟಿ ರೂ. ಧನ ಸಹಾಯ: ರಾಜನಾಥ್ ಸಿಂಗ್
ಕರ್ತವ್ಯದ ವೇಳೆ ಹುತಾತ್ಮರಾಗುವ ಅರೆ ಸೇನಾಪಡೆ ಯೋಧರ ಕುಟುಂಬಸ್ಥರಿಗೆ ತಲಾ 1 ಕೋಟಿ...
ನಾತುಲಾ(ಸಿಕ್ಕಿಂ): ಕರ್ತವ್ಯದ ವೇಳೆ ಹುತಾತ್ಮರಾಗುವ ಅರೆ ಸೇನಾಪಡೆ ಯೋಧರ ಕುಟುಂಬಸ್ಥರಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.
34,000 ಅರೆ ಸೇನಾಪಡೆ ಕಾನ್ಸ್ಟೇಬಲ್ ಗಳನ್ನು ಮುಖ್ಯ ಕಾನ್ಸ್ಟೇಬಲ್ ಗಳ ಹುದ್ದೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಕೂಡ ಅವರು ಘೋಷಿಸಿದರು.
ಶೆರತಂಗ್ ಗಡಿ ಔಟ್ ಪೋಸ್ಟ್ ನಲ್ಲಿ ಇಂಡೊ-ಟಿಬೆಟ್ ಗಡಿ ಪೊಲೀಸ್ ಪಡೆಯ ಸೈನಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಅರೆ ಸೇನಾಪಡೆ ಜವಾನರ ತ್ಯಾಗ, ಬಲಿದಾನಗಳ ಬಗ್ಗೆ ದೇಶ ಹೆಮ್ಮೆಪಡುತ್ತದೆ ಎಂದು ಹೇಳಿದರು.
ದೇಶದ ಕೇಂದ್ರ ಮತ್ತು ಪೂರ್ವ ಭಾಗಗಳಲ್ಲಿ, ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳ ವಿರುದ್ಧ ಅರೆ ಸೇನಾಪಡೆಗಳು ಯುದ್ಧ ಮಾಡುತ್ತಾ ಬಂದಿದ್ದು, ಗಡಿ ಭಾಗಗಳನ್ನು ನಿರಾಶ್ರಯ ಪ್ರದೇಶಗಳಲ್ಲಿ ಅರೆ ಸೇನಾಪಡೆಗಳು ಕಾಯುತ್ತಾ ಬಂದಿವೆ.
ನಮ್ಮ ಯೋಧರ ತ್ಯಾಗ, ಬಲಿದಾನಗಳಿಗೆ ಹಣದ ಮೂಲಕ ಪರಿಹಾರ ತುಂಬಲು ಸಾಧ್ಯವಿಲ್ಲ. ಆದರೆ ಹುತಾತ್ಮರ ಕುಟುಂಬದವರು ಯಾವುದೇ ತೊಂದರೆ ಅನುಭವಿಸಬಾರದು. ಹೀಗಾಗಿ ಪ್ರತಿ ಪ್ಯಾರಾ ಮಿಲಿಟರಿ ಯೋಧರ ಕುಟುಂಬದವರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಛತ್ತೀಸ್ ಗಢದ ಸುಕ್ಮಾದಲ್ಲಿ ನಕ್ಸಲೀಯರು ಕೇಂದ್ರ ಮೀಸಲು ಪೊಲೀಸ್ ಪಡೆಯ 25 ಜವಾನರನ್ನು ಕೊಂದ ತಿಂಗಳ ನಂತರ ಕೇಂದ್ರ ಸರ್ಕಾರ ಈ ಪರಿಹಾರ ಘೋಷಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ