ಇಸ್ರೋ ಉಪಗ್ರಹ ಉಡಾವಣೆ
ದೇಶ
ಇಸ್ರೋ ಉಪಗ್ರಹಗಳ ಉಡಾವಣೆ: ಹೈ ಸ್ಪೀಡ್ ಇಂಟರ್ ನೆಟ್ ನಲ್ಲಿ ಹೊಸ ಭಾಷ್ಯ ಬರೆಯಲಿದೆ ಭಾರತ!
ಇಸ್ರೋ ಉಡವಾಣೆ ಮಾಡಲಿರುವ ಮೂರು ಸಂವಹನ ಉಪಗ್ರಹಗಳ ಮೂಲಕ ಭಾರತ ಹೈಸ್ಪೀಡ್ ಇಂಟರ್ ನೆಟ್ ಯುಗಕ್ಕೆ ಕಾಲಿಡಲಿದೆ.
ನವದೆಹಲಿ: ಇಂಟರ್ ನೆಟ್ ಬಳಕೆದಾರರ ವಿಷಯದಲ್ಲಿ ಭಾರತ ಕಳೆದ ವರ್ಷ ಅಮೆರಿಕಾವನ್ನು ಹಿಂದಿಕ್ಕಿ ಚೀನಾ ನಂತರ ಎರಡನೇ ಸ್ಥಾನದಲ್ಲಿತ್ತು. ಆದರೆ ಇಂಟರ್ ನೆಟ್ ವೇಗದ ವಿಷಯಕ್ಕೆ ಬಂದಾಗ ಏಷ್ಯಾದ ಹಲವು ದೇಶಗಳಿಗೆ ಹೋಲಿಸಿದರೆ ಭಾರತ ಹಿಂದಿದ್ದು, ಸಾಧಿಸಬೇಕಾದದ್ದು ಇನ್ನೂ ಸಾಕಷ್ಟಿದೆ. ಆದರೆ ಇನ್ನು 18 ತಿಂಗಳಲ್ಲಿ ಈ ಪರಿಸ್ಥಿತಿ ಬದಲಾಗಲಿದ್ದು, ಇಸ್ರೋ ಉಡವಾಣೆ ಮಾಡಲಿರುವ ಮೂರು ಸಂವಹನ ಉಪಗ್ರಹಗಳ ಮೂಲಕ ಭಾರತ ಹೈಸ್ಪೀಡ್ ಇಂಟರ್ ನೆಟ್ ಯುಗಕ್ಕೆ ಕಾಲಿಡಲಿದೆ.
ಈ ಬಗ್ಗೆ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಮಾಹಿತಿ ನೀಡಿದ್ದು, ಜೂನ್ ನಲ್ಲಿ ಜಿಎಸ್ಎಟಿ-19, ಜಿಎಸ್ಎ ಟಿ-11 ಹಾಗೂ ಜಿಎಸ್ಎಟಿ-20 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಭಾರತ ಹೈಸ್ಪೀಡ್ ಇಂಟರ್ ನೆಟ್ ನಲ್ಲಿ ಮತ್ತಷ್ಟು ಮೇಲ್ಮಟ್ಟಕ್ಕೆ ಏರಲು ಈ ಉಪಗ್ರಹಗಳ ಉಡಾವಣೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಪ್ರದೇಶಗಳನ್ನು ತಲುಪಲು ಸಾಮಾನ್ಯವಾಗಿ ಇತರ ಉಪಗ್ರಹಗಳು ಬ್ರಾಡ್ ಸಿಗ್ನಲ್ ಬೀಮ್ ನ್ನು ಬಳಕೆ ಮಾಡಿಕೊಂಡರೆ ಈ ಉಪಗ್ರಹಗಳು, ನ್ಯಾರೋ( narrow) ಬೀಮ್( ಸಿಗ್ನಲ್ ಗಳನ್ನು) ಪುನಃ ಬಳಕೆ ಮಾಡಿಕೊಳ್ಳುವುದು ಈ ಉಪಗ್ರಹಗಳ ವೈಷಿಷ್ಟ್ಯವಾಗಿದೆ. ಒಮ್ಮೆ ಈ ಉಪಗ್ರಹಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ ಅತ್ಯುತ್ತಮ ಗುಣಮಟ್ಟದ ಇಂಟರ್ ನೆಟ್, ದೂರವಾಣಿ, ವಿಡಿಯೋ ಸೌಲಭ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗಲಿದೆ ಎಂದು ಇಸ್ರೋ ಸಂಸ್ಥೆ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ