ಲಖನೌ: ಸಹರನಾಪುರ ಹಿಂಸಾಚಾರ ಪ್ರಕರಣವೊಂದು ಪೂರ್ವ ನಿಯೋಜಿತ ಪಿತೂರಿಯಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಹೇಳಿದ್ದಾರೆ.
ಉತ್ತರಪ್ರದೇಶದ ಸಹರನಾಪುರದಲ್ಲಿ ದಲಿತ ಮತ್ತು ರಜಪೂತ ಸಮುದಾಯಗಳ ನಡುವೆ ಕೆಲ ದಿನಗಳ ಹಿಂದಷ್ಟೇ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಯೋಗಿ ಆದಿತ್ಯನಾಥ್ ಅವರು, ಹಿಂಸಾಚಾರವೊಂದು ಪೂರ್ವ ನಿಯೋಜಿತ ಪಿತೂರಿಯಾಗಿದೆ. ಪ್ರಸ್ತುತ ಸಹರನಾಪುರದಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಜನಜೀವನ ಸಾಮಾನ್ಯವಾಗಿದೆ. ಶೀಘ್ರದಲ್ಲಿ ಜಿಲ್ಲಾಧಿಕಾರಿಗಳ ನೂತನ ತಂಡವನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕಳೆದೆರಡು ದಿನಗಳಿಂದ ಸಹರನಾಪುರದಲ್ಲಿ ಹಿಂಸಾಚಾರ ನಡೆದಿತ್ತು. ಹಿಂಸಾಚಾರ ಹತ್ತಿಕ್ಕುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯ 400ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿತ್ತು. ಇಲ್ಲದೆ, ಹಿಂಸಾಚಾರ ಕುರಿತಂತೆ ವರದಿ ಸಲ್ಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿತ್ತು.