ಸುಖೋಯ್-30 ಯುದ್ಧ ವಿಮಾನ ಪತನ ಪ್ರಕರಣ: ಪೈಲಟ್'ನ ರಕ್ತಸಿಕ್ತ ಬೂಟು, ಇನ್ನಿತರೆ ವಸ್ತುಗಳು ಪತ್ತೆ

ಸುಖೋಯ್-30 ಯುದ್ಧ ವಿಮಾನ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಪೈಲಟ್ ಗಳ ಪೈಕಿ ಓರ್ವನ ರಕ್ತಸಿಕ್ತ ಬೂಟು ಹಾಗೂ ಇನ್ನಿತರೆ ವಸ್ತುಗಳು ಪತ್ತೆಯಾಗಿರುವುದಾಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗುವಾಹಟಿ: ಸುಖೋಯ್-30 ಯುದ್ಧ ವಿಮಾನ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಪೈಲಟ್ ಗಳ ಪೈಕಿ ಓರ್ವನ ರಕ್ತಸಿಕ್ತ ಬೂಟು ಹಾಗೂ ಇನ್ನಿತರೆ ವಸ್ತುಗಳು ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ .
ಮೇ,23 ರಂದು ಬೆಳಿಗ್ಗೆ 10.30ರ ಸುಮಾರಿಗೆ ಅಸ್ಸಾಂನ ತೇಜ್'ಪುರದಿಂದ ಹಾರಾಟ ಪ್ರಾರಂಭಿಸಿದ್ದ ಸುಖೋಯ್-30 ಯುದ್ಧ ವಿಮಾನ ತೇಜ್'ಪುರದಿಂದ 60 ಕಿ.ಮೀ ದೂರ ತೆರಳುತ್ತಿದ್ದಂತೆ ರೆಡಾರ್ ಸಂಪರ್ಕ ಕಡಿತುಗೊಂಡಿತ್ತು. ವಿಮಾನ ನಾಪತ್ತೆಯಾದ ಪ್ರದೇಶ ಚೀನಾದ ಗಡಿ ಸಮೀಪವಿತ್ತು. 
ಮೇ.26 ರಂದು ವಿಮಾನದ ಅವಶೇಷ ತೇಜ್ ಪುರದಿಂದ 60 ಕಿ.ಮೀ ದೂರದ ದಟ್ಟ ಅರಣ್ಯದ ಮಧ್ಯೆ ಪತ್ತೆಯಾಗಿತ್ತು. ಯುದ್ಧ ವಿಮಾನದ ಬ್ಲಾಕ್ ಬಾಕ್ಸ್ ದೊರಕಿತ್ತು. ಆದರೆ, ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳ ಬಗ್ಗೆ ಯಾವುದೇ ಸುಳಿವುಗಳು ಸಿಕ್ಕಿರಲಿಲ್ಲ. ಯುದ್ಧ ವಿಮಾನ ಕೊನೆಯದಾಗಿ ಸಂಪರ್ಕಕ್ಕೆ ಸಿಕ್ಕಿದ ಸ್ಥಳಕ್ಕೆ ಸಮೀಪದಲ್ಲಿಯೇ ಅವಶೇಷಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಪೈಲಟ್ ಗಳಿಗಾಗಿ ಅಧಿಕಾರಿಗಳು ತೀವ್ರ ಶೋಧ ಆರಂಭಿಸಿದ್ದರು. 
ಇದೀಗ ಇಬ್ಬರು ಪೈಲಟ್ ಗಳ ಪೈಕಿ ಒಬ್ಬ ಪೈಲಟ್'ನ ರಕ್ತಸಿಕ್ತವಾಗಿರುವ ಬೂಟು, ಅರೆ ಸುಟ್ಟ ಪಾನ್ ಕಾರ್ಡ್ ಮತ್ತು ಹಣದ ಪರ್ಸ್ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಆದರೆ, ಪೈಲಟ್ ಗಳು ಸ್ಥಿತಿ ಏನಾಗಿದೆ ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಪೈಲಟ್ ಗಳ ಶವಗಳೂ ಕೂಡ ಈ ವರೆಗೂ ಪತ್ತೆಯಾಗಿಲ್ಲ 
ಪ್ರತಿಕೂಲ ಹವಾಮಾನ ಇರುವ ಹೊರತಾಗಿಯೂ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ. ಆದರೂ, ನಾಪತ್ತೆಯಾಗಿರುವ ಇಬ್ಬರು ಪೈಲಟ್ ಗಳ ಬಗ್ಗೆ ಯಾವುದೇ ಮಾಹಿತಿಗಳಾಗಲೀ, ಸುಳಿವುಗಳಾಗಲೀ ದೊರಕಿಲ್ಲ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com