ಅಕ್ರಮ ಆಸ್ತಿ ಗಳಿಕೆ: ಸದ್ದುಗದ್ದಲವಿಲ್ಲದೇ ಜಯಾ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭ!

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿದ್ದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಸರ್ಕಾರ ರಹಸ್ಯವಾಗಿ ಚಾಲನೆ ನೀಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿದ್ದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಸರ್ಕಾರ ರಹಸ್ಯವಾಗಿ  ಚಾಲನೆ ನೀಡಿದೆ ಎಂದು ತಿಳಿದುಬಂದಿದೆ.

ಅಕ್ರಮ ಆಸ್ಥಿಗಳಿಕೆ ಪ್ರಕರಣ ಸಂಬಂಧ ಶಿಕ್ಷೆಗೆ ಈಡಾಗಿರುವ ಜಯಲಲಿತಾ ಅವರ ಆಪ್ತ ಸ್ನೇಹಿತೆ ವಿಕೆ ಶಶಿಕಲಾ ಮತ್ತು ಸಂಬಂಧಿಕರಾದ ಜೆ.ಇಳವರಸಿ ಮತ್ತು ವಿ.ಎನ್‌. ಸುಧಾಕರನ್‌ ಅವರ ಆಸ್ತಿಯನ್ನು ಮುಟ್ಟುಗೋಲು  ಹಾಕಿಕೊಳ್ಳುವ ಪ್ರಕ್ರಿಯೆಗೆ ಯಾವುದೇ ರೀತಿ ಸದ್ದುಗದ್ದಲವಿಲ್ಲದೇ ಚಾಲನೆ ನೀಡಲಾಗಿದೆ. ಚೆನ್ನೈ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಇರುವ 60ಕ್ಕೂ ಹೆಚ್ಚು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಂಬಂಧ ಪಟ್ಟ  ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಚಕ್ಷಣ ಮತ್ತು ಭ್ರಷ್ಟಾಚಾರ ತಡೆ ನಿರ್ದೇಶನಾಲಯವು (ಡಿವಿಎಸಿ) ಈ ಅಕ್ರಮ ಆಸ್ತಿ ಪ್ರಕರಣದ ನೋಡಲ್‌ ಸಂಸ್ಥೆಯಾಗಿತ್ತು. ತನಿಖೆ ಸಂದರ್ಭದಲ್ಲಿ ಡಿವಿಎಸಿ 120ಕ್ಕೂ ಹೆಚ್ಚು ಆಸ್ತಿಗಳನ್ನು ಗುರುತಿಸಿತ್ತು. ಈಗ ನ್ಯಾಯಾಲಯದ  ಸೂಚನೆ ಪ್ರಕಾರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶ ಪ್ರಕಟವಾಗುವ ಮೊದಲೇ ಜಯಲಲಿತಾ ಅವರು ನಿಧನರಾದ ಕಾರಣ ಪ್ರಕರಣದಿಂದ ಅವರ ಹೆಸರು ಕೈಬಿಡಲಾಗಿತ್ತು.  ಆದರೆ ಅವರ ಹೆಸರಿನಲ್ಲಿ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿತ್ತು.

ಅಂತೆಯೇ ವಿಚಾರಣಾ ನ್ಯಾಯಾಲಯವು ತನ್ನ ಆದೇಶದಲ್ಲಿ ಜಯಲಲಿತಾ ಅವರಿಗೆ ರು.100 ಕೋಟಿ ಮತ್ತು ಇತರರಿಗೆ ತಲಾ ರು.10 ಕೋಟಿ ದಂಡ ವಿಧಿಸಿತ್ತು. ಈ ಆಸ್ತಿಗಳನ್ನು ಮಾರಾಟ ಮಾಡಿ ಈ ಮೊತ್ತವನ್ನು  ತುಂಬಿಕೊಳ್ಳಬೇಕು ಎಂದೂ ಬೆಂಗಳೂರಿನ ವಿಚಾರಣಾ ನ್ಯಾಯಾಲಯ ಆದೇಶ ನೀಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು.

ಜಪ್ತಿ ಪಟ್ಟಿಯಲ್ಲಿ ಫೋಯಸ್ ಗಾರ್ಡನ್ ನಿವಾಸವಿಲ್ಲ
ಇನ್ನು ಜಯಲಲಿತಾ ಅವರು ನೆಲೆಸಿದ್ದ ಚೆನ್ನೈನ ಪೊಯೆಸ್‌ ಗಾರ್ಡನ್‌ ನಿವಾಸ ಮುಟ್ಟುಗೋಲು ಪಟ್ಟಿಯಲ್ಲಿಲ್ಲ ಎಂದು ತಿಳಿದುಬಂದಿದೆ. ಅಧಿಕಾರಿಯೊಬ್ಬರು ತಿಳಿಸಿರುವಂತೆ  ಜಯಲಲಿತಾ ಮತ್ತು ಇತರ ಮೂವರ  ಮಾಲೀಕತ್ವದ  ಕಂಪೆನಿಯ ಹೆಸರುಗಳಲ್ಲಿ ಈ ಆಸ್ತಿಗಳು ನೋಂದಣಿಯಾಗಿವೆ. ಇದೇ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್‌ ಅವರು ಬೆಂಗಳೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಪೋಯಸ್ ಗಾರ್ಡನ್ ನಿವಾಸವನ್ನು   ಮುಟ್ಟುಗೋಲು ಹಾಕಿಕೊಳ್ಳಲಾಗುವುದಿಲ್ಲ. ಏಕೆಂದರೆ, ಇದು ಅವರು ಸಂಪಾದಿಸಿದ್ದ ಅಕ್ರಮ ಆಸ್ತಿಗಳ ಪಟ್ಟಿಯಲ್ಲಿ ಸೇರಿಲ್ಲ ಎಂದು ಹೇಳಿದ್ದಾರೆ.

ಜಯಲಲಿತಾ ಅವರು ಪೊಯೆಸ್‌ ಗಾರ್ಡನ್‌ನಲ್ಲಿರುವ ‘ವೇದನಿಲಯಂ’ ಎಂಬ ಈ ಮನೆಯನ್ನು 1967ರಲ್ಲಿ ರು.1.37 ಲಕ್ಷಕ್ಕೆ ಖರೀದಿಸಿದ್ದರು. ಈಗ ಇದರ ಮೌಲ್ಯ ರು44 ಕೋಟಿ ರು.ಗಳಾಗಿವೆ. ಇದರ ಹೊರತಾಗಿ ಜಯಲಲಿತಾ  ಅವರು ತಿರುವಳ್ಳೂರು, ಕಾಂಚೀಪುರ ಮತ್ತು ಹೈದರಾಬಾದ್‌ಗಳಲ್ಲಿಯೂ ಭಾರಿ ಪ್ರಮಾಣದ ಆಸ್ತಿ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com