ಶ್ರೀನಗರ: ಬುರ್ಹಾನ್ ವಾನಿ, ಸಬ್ಜಾರ್ ಭಟ್ ಹತ್ಯೆಯ ಬೆನ್ನಲ್ಲೇ 27 ಯುವ ಉಗ್ರರ ಪಡೆಯೊಂದನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಜ್ಜುಗೊಳಿಸಿದ್ದು, ಕಾಶ್ಮೀರದಲ್ಲಿ ಮತ್ತಷ್ಟು ಹಿಂಸಾಚಾರ ಸೃಷ್ಟಿಸಲು ಸಂಚು ರೂಪಿಸಿ ಭಾರತದೊಳಗೆ ನುಸುಳಿಸಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಎಲ್ಲಾ 27 ಉಗ್ರರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿಯೇ ತರಬೇತಿ ನೀಡಲಾಗಿದ್ದು, ಉಗ್ರರ ಫೋಟೋಸೆಷನ್ ಕೂಡ ನಡೆಸಲಾಗಿದೆ.
27 ಹೊಸ ಹಿಜ್ಬುಲ್ ಉಗ್ರ ಪಡೆಯ ಫೋಟೋಗಳನ್ನು ಹಿಜ್ಬುಲ್ ಉಗ್ರ ಸಂಘಟನೆ ಬಿಡುಗಡೆ ಮಾಡಿದ್ದು, ಇದೀಗ ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
2015ರಲ್ಲಿ ಹಿಬ್ಜುಲ್ ಉಗ್ರ ಸಂಘಟನೆ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿ ತನ್ನ 11 ಸಂಗಡಿಗರ ಫೋಟೋವೊಂದನ್ನು ಬಿಡುಗಡೆ ಮಾಡಿದ್ದ. ಈ ಪೈಕಿ 9 ಉಗ್ರರನ್ನು ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ. ಇದರ ಬೆನ್ಲಲ್ಲೇ ಇದೀಗ ಉಗ್ರ ಪಡೆಗಳು ಮತ್ತೆ ಹೊಸ ಫೋಟೋವನ್ನು ಬಿಡುಗಡೆ ಮಾಡಿದ್ದು, ಮತ್ತಷ್ಟು ದಾಳಿ ನಡೆಸುವ ಸುಳಿವು ನೀಡಿದೆ.