ನಾಗರೀಕತ್ವ ಸಾಬೀತುಪಡಿಸುವಂತೆ ಮತ್ತೋರ್ವ ಯೋಧನಿಗೆ ಅಧಿಕಾರಿಗಳ ಅಪಮಾನ!

ವಿದೇಶಿಯರ ನ್ಯಾಯಮಂಡಳಿ ಅಧಿಕಾರಿಗಳಿಂದ ಅಂತಹುದೇ ಮತ್ತೊಂದು ಯಡವಟ್ಟಾಗಿದ್ದು, ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಯೋಧರ ನಾಗರೀಕತ್ವ ಸಾಬೀತುಪಡಿಸುವಂತೆ ನೋಟಿಸ್ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗುವಾಹತಿ: 20 ವರ್ಷಗಳ ಕಾಲ ದೇಶಕ್ಕಾಗಿ ಗಡಿಯಲ್ಲಿ ಸೇವೆ ಸಲ್ಲಿಸಿದ ಯೋಧನೋರ್ವನನ್ನು ಭಾರತೀಯನೇ ಅಲ್ಲ ಎಂದು ಅಪಮಾನಿಸಿದ್ದ ವಿದೇಶಿಯರ ನ್ಯಾಯಮಂಡಳಿ ಅಧಿಕಾರಿಗಳಿಂದ ಅಂತಹುದೇ ಮತ್ತೊಂದು  ಯಡವಟ್ಟಾಗಿದ್ದು, ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಯೋಧರ ನಾಗರೀಕತ್ವ ಸಾಬೀತುಪಡಿಸುವಂತೆ ನೋಟಿಸ್ ನೀಡಿದ್ದಾರೆ.
ಸೇನೆಯಿಂದ ನಿವೃತ್ತರಾಗಿ ಪ್ರಸ್ತುತ ಗುವಾಹತಿಯಲ್ಲಿ ನೆಲೆಯೂರಿರುವ ನಿವೃತ್ತ ಸೇನಾಧಿಕಾರಿ ಮಹಿರುದ್ದೀನ್ ಅಹ್ಮದ್ ಅವರಿಗೆ ವಿದೇಶಿಯರ ನ್ಯಾಯಮಂಡಳಿ ಭಾರತೀಯ ನಾಗರೀಕತ್ವ ಸಾಬೀತುಪಡಿಸುವಂತೆ ನೋಟಿಸ್ ಜಾರಿ  ಮಾಡಿದೆ. ಅಧಿಕಾರಿಗಳು ನೀಡಿರುವ ನೋಟಿಸ್ ನಲ್ಲಿ ನೀವು ಮತ್ತು ನಿಮ್ಮ ಕುಟುಂಬ 1971ರಲ್ಲಿ ಮಾರ್ಚ್ 25ರಂದು ಯಾವುದೇ ಅಧಿಕೃತ ದಾಖಲೆಗಳಿಲ್ಲದೇ ಭಾರತಕ್ಕೆ ಅಕ್ರಮವಾಗಿ ವಲಸೆಬಂದಿದ್ದೀರಿ ಎಂಬ ಶಂಕೆ ಇದೆ. ಹೀಗಾಗಿ  ಸೂಕ್ತ ದಾಖಲೆಗಳೊಂದಿಗೆ ನಿಮ್ಮ ನಾಗರಿಕತ್ವ ಸಾಬೀತುಪಡಿಸಬೇಕು ಎಂದು ಕಳೆದ ಸೆಪ್ಟೆಂಬರ್ 16 ರಂದು ನೋಟಿಸ್ ಜಾರಿ ಮಾಡಿದ್ದಾರೆ.
ಇನ್ನು ಈ ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಭಾರಿ ಚರ್ಚೆಗಳಾಗುತ್ತಿದ್ದು, ನಿವೃತ್ತ ಸೇನಾಧಿಕಾರಿ ಮಹಿರುದ್ದೀನ್ ಅಹ್ಮದ್ ಅವರು ಹೇಳಿರುವಂತೆ ನಾನು ಹುಟ್ಟಿದ್ದು ಭಾರತದಲ್ಲೇ..ಬಾರ್ಪೇಟಾದಲ್ಲಿ 1964ರಲ್ಲಿ ನಾನು ಜನಿಸಿದೆ.  ಇಷ್ಟಕ್ಕೂ ನಾನು ಬೇರೆ ದೇಶದವನಾಗಿದ್ದರೆ ಸೇನೆಯಲ್ಲಿ ನನಗೆ ಹೇಗೆ ಕೆಲಸ ಸಿಗುತ್ತಿತ್ತು ಎಂಬ ಕನಿಷ್ಠ ಆಲೋಚನೆ ಕೂಡ ಅಧಿಕಾರಿಗಳಿಗೆ ಇಲ್ಲವೇ..? ದಶಕಗಳ ಕಾಲ ದೇಶದ ಗಡಿಯಲ್ಲಿ ನಾನು ಸೇವೆ ಸಲ್ಲಿಸಿದ್ದು, 2004ರಲ್ಲಿ ನಾನು  ಸೇನೆಯಿಂದ ನಿವೃತ್ತನಾಗಿದ್ದೇನೆ. ಇಂತಹ ಪ್ರಕರಣಗಳನ್ನು ನಮ್ಮಂತಹ ಸೈನಿಕರಿಗೆ ತುಂಬಾ ನೋವನ್ನುಂಟು ಮಾಡುತ್ತದೆ. ದೇಶಕ್ಕಾಗಿ ದುಡಿದ ನಮ್ಮಂತಹವರಿಗೆ ಇಂತಹ ಅವಮಾನ ಸಲ್ಲದು.. ಎಂದು ಹೇಳಿದ್ದಾರೆ.
ಅಂತೆಯೇ ಇಂತಹ ನಿರ್ಲಕ್ಷ್ಯದ ಪ್ರಕರಗಣಗಳಿಗೆ ಇತಿಶ್ರಿ ಹಾಕಲೇಬೇಕಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಇಂತಹ ಪ್ರಕರಣಗಳಿಗೆ ಅಂತ್ಯಹಾಕುವಂತೆ ಮನವಿ  ಮಾಡುತ್ತೇನೆ ಎಂದು ಮಹಿರುದ್ದೀನ್ ಅಹ್ಮದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com