ಸಾಂದರ್ಭಿಕ ಚಿತ್ರ
ದೇಶ
ದೆಹಲಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ನ.13ರಿಂದ 5 ದಿನಗಳವರೆಗೆ ಸಮ-ಬೆಸ ನೀತಿ ಜಾರಿ
ರಾಜಧಾನಿಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಮ-ಬೆಸ...
ನವದೆಹಲಿ: ರಾಜಧಾನಿಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಮ-ಬೆಸ ನೀತಿಯನ್ನು ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ. ಇದು ನೀತಿಯ ಮೂರನೇ ಆವೃತ್ತಿಯಾಗಿದೆ. ಕಳೆದ ವರ್ಷ ಎರಡು ಬಾರಿ ನೀತಿಯನ್ನು ಜಾರಿಗೆ ತರಲಾಗಿತ್ತು.
ಇದೇ 13ರಿಂದ 5 ದಿನಗಳ ಕಾಸ ಸಮ-ಬೆಸ ನೀತಿಯನ್ನು ಜಾರಿಗೆ ತರಲಾಗುತ್ತದೆ ಎಂದು ದೆಹಲಿ ಸರ್ಕಾರದ ಸಾರಿಗೆ ಸಚಿವ ಕೈಲಾಶ್ ಗೆಹ್ಲೊಟ್ ತಿಳಿಸಿದ್ದಾರೆ.ಯೋಜನೆಯಡಿ ಖಾಸಗಿ ವಾಹನಗಳನ್ನು ತಮ್ಮ ಲೈಸೆನ್ಸ್ ಪ್ಲೇಟ್ ನ ಕೊನೆಯ ಸಂಖ್ಯೆಯನ್ನು ಆಧರಿಸಿ ಸಂಚರಿಸಲು ಅನುಮತಿ ನೀಡಲಾಗುತ್ತದೆ.
ಬೆಸ ಸಂಖ್ಯೆಯ ಕಾರುಗಳನ್ನು ಬೆಸ ದಿನಾಂಕಗಳಲ್ಲಿ ಮತ್ತು ಸಮ ಸಂಖ್ಯೆಯ ಕಾರುಗಳನ್ನು ಸಮ ದಿನಾಂಕಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗುತ್ತದೆ. ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ 48 ಗಂಟೆಗಳ ಕಾಲ ತೀವ್ರವಾಗಿದ್ದರೆ ದೆಹಲಿ ಸರ್ಕಾರ ಸಮ-ಬೆಸ ನೀತಿಯ ಯೋಜನೆಯನ್ನು ಜಾರಿಗೆ ತರುತ್ತದೆ. ರಸ್ತೆ ತಪಾಸಣೆ ಕ್ರಮಗಳು ಜಾರಿಗೆ ಬಂದರೆ ದ್ವಿಚಕ್ರ ವಾಹನಗಳಿಗೆ ವಿನಾಯ್ತಿ ನೀಡಲಾಗುತ್ತದೆ ಎಂದು ಗೆಹ್ಲೊಟ್ ತಿಳಿಸಿದ್ದಾರೆ.
ಈ ಮಧ್ಯೆ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಮಿತಿಮೀರಿರುವುದರಿಂದ ಗುರುಗ್ರಾಮ್ ನಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಇಂದು ಮತ್ತು ನಾಳೆ ಮುಚ್ಚಿವೆ.
ದೆಹಲಿ ಸುತ್ತಮುತ್ತ ವಾಯುಮಾಲಿನ್ಯ ತೀರಾ ಹದಗೆಟ್ಟಿದ್ದು ಎಲ್ಲಾ ಶಾಲೆಗಳಿಗೆ ಭಾನುವಾರದವರೆಗೆ ರಜೆ ನೀಡುವಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆದೇಶ ನೀಡಿದ್ದರು.
ಕೇವಲ ಶಾಲೆಗಳು ಮಾತ್ರವಲ್ಲದೆ ಇಟ್ಟಿಗೆ ಕಾರ್ಖಾನೆಗಳು, ಕಲ್ಲಿನ ಕಾರ್ಖಾನೆಗಳನ್ನು ಕೂಡ ಮುಂದಿನ ಆದೇಶದವರೆಗೆ ಮುಚ್ಚಲು ಹೇಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ