ಸಿಂಹ ನೋಡಿ ಹೆದರುತ್ತಿದ್ದ ಜನರು ಇಂದು ಮೋದಿಯಿಂದಾಗಿ ಹಸು ನೋಡಿ ಹೆದರುತ್ತಿದ್ದಾರೆ: ಲಾಲೂ

ಈ ಹಿಂದೆ ಸಿಂಹವನ್ನು ನೋಡಿ ಹೆದರುತ್ತಿದ್ದ ಜನರು, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರಣದಿಂದಾಗಿ ಹಸುವನ್ನು ನೋಡಿ ಹೆದರುತ್ತಿದ್ದಾರೆಂದು ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಭಾನುವಾರ ಹೇಳಿದ್ದಾರೆ...
ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್
ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್
ಪಾಟ್ನ: ಈ ಹಿಂದೆ ಸಿಂಹವನ್ನು ನೋಡಿ ಹೆದರುತ್ತಿದ್ದ ಜನರು, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರಣದಿಂದಾಗಿ ಹಸುವನ್ನು ನೋಡಿ ಹೆದರುತ್ತಿದ್ದಾರೆಂದು ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಭಾನುವಾರ ಹೇಳಿದ್ದಾರೆ. 
ರಾಷ್ಟ್ರೀಯ ಜನತಾ ದಳ ಪಕ್ಷದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರು, ಹಿಂದೆ ಜನರು ಸಿಂಹವನ್ನು ನೋಡಿ ಹೆದರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿಯವರಿಂದಾಗಿ ಹಸುವನ್ನು ನೋಡಿ ಹೆದರುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ. 
ಸಂಪೂರ್ಣ ವೈಫಲ್ಯವನ್ನು ಕಂಡಿರುವ ಪ್ರಧಾನಿ ಮೋದಿ ಸರ್ಕಾರದ ಮೇಲೆ ಜನರು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ನೀಡಲಾಗಿರುವ ಭರವಸೆಗಳ ಪೈಕಿ ಒಂದನ್ನೂ ಮೋದಿ ಸರ್ಕಾರ ಪೂರ್ಣಗೊಳಿಸಿಲ್ಲ. ನೋಟು ನಿಷೇಧ, ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ)ಯಿಂದಾಗಿ ಜನರ ಮನಸ್ಸಿಗೆ ಸಾಕಷ್ಟು ನೋವಾಗಿದೆ. 2018ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಸ್ಪರ್ಧಿಸಬಹುದು. ನಮ್ಮ ಪಕ್ಷದ ಕಾರ್ಯಕರ್ತರು ಸಂಸದೀಯ ಚುನಾವಣೆಗೆ ಸಿದ್ಧರಿರಬೇಕು. 
ಲೋಕಸಭಾ ಚುನಾವಣೆ ಯಾವಾಗ ಬೇಕಾದರೂ ನಡೆಯಲಿ, ವಿರೋಧ ಪಕ್ಷಗಳು ಭಾರತೀಯ ಜನತಾ ಪಕ್ಷವನ್ನು ಸೋಲಿಸಲಿದೆ. ನನ್ನ ಪುತ್ರ ಹಾಗೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಗುಜರಾತ್ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಜೊತೆಗೆ ಸಂಪರ್ಕದಲ್ಲಿದ್ದಾರೆ. ದೇಶದಲ್ಲಿರುವ ಕೋಮವಾದಿ ಪಕ್ಷವನ್ನು ಯುವ ನಾಯಕರಾದ ಹಾರ್ದಿಕ್ ಪಟೇಲ್ ಹಾಗೂ ತೇಜಸ್ವಿ ಯಾದವ್ ಬೇರು ಸಮೇತ ಕಿತ್ತುಹಾಕಲಿದ್ದಾರೆಂದು ತಿಳಿಸಿದ್ದಾರೆ. 
ವಿರೋಧ ಪಕ್ಷಗಳನ್ನು ಗುರಿ ಮಾಡುವ ಬದಲು ಮಾಧ್ಯಮಗಳು ಬಿಜೆಪಿ ಹಾಗೂ ಮೋದಿಯವರ ಬಣ್ಣವನ್ನು ಬಯಲು ಮಾಡಬೇಕು. ಅಮೆರಿಕ ಹಾಗೂ ಅಭಿವೃದ್ಧಿಗೊಂಡಿರುವ ಇತರೆ ದೇಶಗಳಲ್ಲಿರುವ ಮಾಧ್ಯಮಗಳು ಅಧಿಕಾರದಲ್ಲಿರುವ ಸರ್ಕಾರದ ಹಾಗೂ ಆ ಪಕ್ಷದ ನಾಯಕರನ್ನು ಗುರಿ ಮಾಡಿ, ಅವರ ಬಣ್ಣವನ್ನು ಬಯಲು ಮಾಡುತ್ತಿರುತ್ತವೆ. ನಮ್ಮ ಭಾರತದಲ್ಲಿರುವ ಮಾಧ್ಯಮಗಳು ವಿರೋಧ ಪಕ್ಷಗಳ ವಿರುದ್ಧವೇ ಹೋರಾಟ ಮಾಡುತ್ತವೆ. ಇಂತಹ ಬೆಳವಣಿಗೆಗಳು ಬದಲಾಗಬೇಕಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com