ವೈಷ್ಣೋದೇವಿ ದರ್ಶನಕ್ಕೆ ನೂತನ ಮಾರ್ಗ: ಎನ್'ಜಿಟಿ ನಿರ್ದೇಶನಕ್ಕೆ ಸುಪ್ರೀಂ ತಡೆ

ಪುರಾಣ ಪ್ರಸಿದ್ಧ ವೈಷ್ಣೋದೇವಿ ದರ್ಶನಕ್ಕೆ ನೂತನ ಮಾರ್ಗಕ್ಕೆ ರಾಷ್ಟ್ರೀಯ ಹಸಿರು ಪೀಠ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪುರಾಣ ಪ್ರಸಿದ್ಧ ವೈಷ್ಣೋದೇವಿ ದರ್ಶನಕ್ಕೆ ನೂತನ ಮಾರ್ಗಕ್ಕೆ ರಾಷ್ಟ್ರೀಯ ಹಸಿರು ಪೀಠ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. 
ವೈಷ್ಣೋದೇವಿಗೆ ದಿನಕ್ಕೆ 50 ಸಾವಿರ ಭಕ್ತರ ಭೇಟಿಗೆ ಮಾತ್ರ ಅವಕಾಶ ನೀಡಬೇಕು. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಭಕ್ತರು ಬಂದರೆ ಅವರನ್ನು ಅರ್ಧಕುಮಾರಿ ಅಥವಾ ಕಟ್ರಾದಲ್ಲಿಯೇ ತಡೆಯಬೇಕು. ನ.24ರಿಂದ ಸಂಚಾರಕ್ಕೆ ಮುಕ್ತವಾಗಲಿರುವ ಹೊಸ ರಸ್ತೆ ಪಾದಚಾರಿಗಳು ಮತ್ತು ಬ್ಯಾಟರಿ ಚಾಲಿತ ಕಾರುಗಳಿಗೆ ಮಾತ್ರ ಬಳಕೆಯಾಗಬೇಕೆಂದು ಈ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿತ್ತು. 
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ನಿರ್ದೇಶನ ಕುರಿತಂತೆ ನ್ಯಾಯಮೂರ್ತಿ ಎಂ.ಬಿ ಲೊಕೂರ್ ಮತ್ತು ದೀಪಕ್ ಗುಪ್ತ ಅವರಿದ್ದ ಪೀಠ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ನ.24ರೊಳಗೆ ನೂತನ ಮಾರ್ಗವನ್ನು ತೆರೆಯಲು ಸಾಧ್ಯವಿಲ್ಲ ಎಂದು ಶ್ರೀ ವೈಷ್ಣೋ ದೇವಿ ದೇಗುಲ ಮಂಡಳಿ ಹೇಳಿದೆ. 
ದೇಗುಲದ ಪರವಾಗಿ ವಾದ ಮಂಡಿಸಿರುವ ಹಿರಿಯ ವಕೀಲ ಮುಕುಲ್ ರೊಹ್ಟಕಿಯವರು, ನೂತನ ಮಾರ್ಗದ ಕಾಮಗಾರಿಗಳು ನಡೆಯುತ್ತಿದ್ದು, ನೂತನ ಮಾರ್ಗ ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ತೆರೆಯಲಾಗುತ್ತದೆ. ಎರಡು ಮಾರ್ಗಗಳ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ದೇಗುಲ ಇದೀಗ ಮೂರನೇ ಮಾರ್ಗದ ಕಾಮಗಾರಿಯನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ. 
ವಾದ ಹಾಗೂ ಪ್ರತಿವಾದವನ್ನು ಆಲಿಸಿರುವ ನ್ಯಾಯಪೀಠವು ಇದೀಗ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ನೋಟಿಸ್ ಜಾರಿ ಮಾಡಿದ್ದು, ವೈಷ್ಣೋದೇವಿ ದರ್ಶನಕ್ಕೆ ನೂತನ ಮಾರ್ಗ ಕುರಿತು ನೀಡಿದ್ದ ನಿರ್ದೇಶನಕ್ಕೆ ತಡೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com