ವ್ಯಾಪಂ ಹಗರಣ: 200ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಕ್ರಮಕ್ಕೆ ಸಿಬಿಐ ಆಗ್ರಹ

ಅಧಿಕ ಹಣ ನೀಡಿ ಮ್ಯಾನೇಜ್ ಮೆಂಟ್ ಕೋಟಾದಡಿ ಮಧ್ಯ ಪ್ರದೇಶದ ನಾಲ್ಕು ಖಾಸಗಿ ವೈದ್ಯಕೀಯ....
ದೆಹಲಿಯಲ್ಲಿರುವ ಸಿಬಿಐ ಮುಖ್ಯ ಕಚೇರಿ
ದೆಹಲಿಯಲ್ಲಿರುವ ಸಿಬಿಐ ಮುಖ್ಯ ಕಚೇರಿ
ನವದೆಹಲಿ: ಅಧಿಕ ಹಣ ನೀಡಿ ಮ್ಯಾನೇಜ್ ಮೆಂಟ್ ಕೋಟಾದಡಿ ಮಧ್ಯ ಪ್ರದೇಶದ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಾಗಿದೆ. ವಿದ್ಯಾರ್ಥಿಗಳ ಪ್ರವೇಶ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ವ್ಯಾಪಂ ಕೇಸಿನ ತನಿಖೆ ನಡೆಸುತ್ತಿರುವ ಸಿಬಿಐ ಹೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಾಲ್ಕು ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಯಾವುದೇ ಪ್ರವೇಶ ಪರೀಕ್ಷೆ ಬರೆಯದೆ ಸೀಟು ಗಿಟ್ಟಿಸಿಕೊಂಡಿದ್ದಕ್ಕೆ ಇವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಬಿಐ ಮಧ್ಯ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ.
ಮಧ್ಯ ಪ್ರದೇಶ ವೃತ್ತಿಪರ ಪರೀಕ್ಷೆ ಮಂಡಳಿ(ಹಿಂದಿಯಲ್ಲಿ ವ್ಯಾಪಂ) 2012ರಲ್ಲಿ ನಡೆಸಿದ ಪೂರ್ವ ವೈದ್ಯಕೀಯ ಪರೀಕ್ಷೆ ಕುರಿತು ಸಿಬಿಐ ನಡೆಸಿದ ತನಿಖೆಯನ್ನು ಆಧರಿಸಿ ಸರ್ಕಾರಕ್ಕೆ ಈ ಪತ್ರ ಬರೆಯಲಾಗಿದೆ.
ಕಳೆದ ಗುರುವಾರ ಭೋಪಾಲ್ ನ ವಿಶೇಷ ಸಿಬಿಐ ಕೋರ್ಟ್ ನಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳ ಅಧ್ಯಕ್ಷರು ಮತ್ತು 592 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಸಿಬಿಐ, ನೇಮಕಾತಿ ಹಗರಣದಲ್ಲಿ ಇವರುಗಳ ಪಾತ್ರವಿದೆ ಎಂದು ಹೇಳಿದೆ.
ಎಲ್.ಎನ್.ಮೆಡಿಕಲ್ ಕಾಲೇಜಿನ ಅಧ್ಯಕ್ಷ ಜೆ.ಎನ್.ಚೊಕ್ಸೆ, ಪೀಪಲ್ಸ್ ಮೆಡಿಕಲ್ ಕಾಲೇಜಿನ ಎಸ್.ಎನ್.ವಿಜಯ್ ವರ್ಗಿಯಾ, ಚಿರಾಯು ವೈದ್ಯಕೀಯ ಕಾಲೇಜಿನ ಅಜಯ್ ಗೋಯೆಂಕಾ ಮತ್ತು ಇಂಡೆಕ್ಸ್ ವೈದ್ಯಕೀಯ ಕಾಲೇಜಿನ ಸುರೇಶ್ ಸಿಂಗ್ ಭಡೋರಿಯಾ ಪ್ರವರ್ತಕರಾಗಿದ್ದಾರೆ.
ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ಸಂಪರ್ಕಿಸಿದಾಗ ಮೂವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಭಡೋರಿಯಾ ಪ್ರತಿಕ್ರಿಯೆ ನೀಡಿ, ಸಿಬಿಐ ಆರೋಪಪಟ್ಟಿಯಲ್ಲಿ ತಮ್ಮ ಹೆಸರಾಗಲಿ, ತಮ್ಮ ಕಾಲೇಜಿನ ಹೆಸರಾಗಲಿ ಇಲ್ಲ ಎಂದು ಹೇಳಿದ್ದಾರೆ.
ಈ ಕಾಲೇಜುಗಳಲ್ಲಿ 2012ರಲ್ಲಿ ಮ್ಯಾನೇಜ್ ಮೆಂಟ್ ಕೋಟಾದಡಿ ಒಟ್ಟು 229 ಸೀಟುಗಳನ್ನು ಭರ್ತಿ ಮಾಡಲಾಗಿದ್ದು ಪ್ರತಿ ಸೀಟಿಗೆ 50 ಲಕ್ಷದಿಂದ 1 ಕೋಟಿಯವರೆಗೆ ಶುಲ್ಕ ತೆಗೆದುಕೊಳ್ಳಲಾಗಿತ್ತು. ಪ್ರವೇಶ ಪಡೆದ ಅಭ್ಯರ್ಥಿಗಳು ಯಾರೂ ಪ್ರವೇಶ ಪರೀಕ್ಷೆ ತೆಗೆದುಕೊಂಡಿರಲಿಲ್ಲ, ಇದು ನಿಯಮದ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಸಿಬಿಐ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com