ಕೇಂದ್ರದಿಂದ ಸಣ್ಣ ಉದ್ಯಮಿಗಳಿಗೆ ಜಿಎಸ್ ಟಿ ರಿಲೀಫ್; 27 ವಸ್ತುಗಳ ಮೇಲಿನ ತೆರಿಗೆ ಕಡಿತ

ನಿರೀಕ್ಷೆಯಂತೆಯೇ ಆರ್ಥಿಕ ಅಭಿವೃದ್ಧಿ ಕುಂಠಿತ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಿಎಸ್ ಟಿಯಲ್ಲಿ ಕಡಿತ ಘೋಷಣೆ ಮಾಡಿದ್ದು, ಬ್ರಾಂಡ್ ರಹಿತ ಆಯುರ್ವೇಧ ಔಷಧಿಗಳು ಸೇರಿದಂತೆ ಒಟ್ಟು 27 ವಸ್ತುಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ನಿರೀಕ್ಷೆಯಂತೆಯೇ ಆರ್ಥಿಕ ಅಭಿವೃದ್ಧಿ ಕುಂಠಿತ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಿಎಸ್ ಟಿಯಲ್ಲಿ ಕಡಿತ ಘೋಷಣೆ ಮಾಡಿದ್ದು, ಬ್ರಾಂಡ್ ರಹಿತ ಆಯುರ್ವೇಧ ಔಷಧಿಗಳು ಸೇರಿದಂತೆ ಒಟ್ಟು 27 ವಸ್ತುಗಳ  ಮೇಲಿನ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿದೆ.
ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ನೇತೃತ್ವದಲ್ಲಿ ನಿನ್ನೆ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ವರ್ತಕರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಹಲವು ಸುಧಾರಣೆಗಳನ್ನು ಪ್ರಕಟಿಸಲಾಗಿದೆ. ಒಟ್ಟು 27 ಸರಕುಗಳು ಮತ್ತು  ಸೇವೆಗಳ ತೆರಿಗೆ ದರವನ್ನು ಇಳಿಸಲಾಗಿದ್ದು, ರಫ್ತುದಾರರ ಅನುಕೂಲಕ್ಕಾಗಿ ತೆರಿಗೆ ಮರುಪಾವತಿಯನ್ನು ತ್ವರಿತಗೊಳಿಸಲು ನಿರ್ಧರಿಸಲಾಗಿದೆ.

ಮಾರ್ಬಲ್‌ ಮತ್ತು ಗ್ರಾನೈಟ್‌ ಬಿಟ್ಟು ನೆಲಕ್ಕೆ ಹಾಸಲು ಬಳಸುವ ಕಲ್ಲುಗಳು, ಲೇಖನ ಸಾಮಗ್ರಿ, ಚಪಾತಿ ಮತ್ತು ಕಕ್ರಾ, ಡೀಸೆಲ್‌ ಎಂಜಿನ್‌ ಬಿಡಿಭಾಗಗಳು ಮತ್ತು ಪಂಪ್‌ ಗಳು, ಬ್ರಾಂಡ್‌ ರಹಿತ ಕುರುಕಲು ತಿಂಡಿ, ಬ್ರಾಂಡ್‌ ರಹಿತ  ಆಯುರ್ವೇದ ಔಷಧಗಳು, ಕೈಮಗ್ಗದ ಬಟ್ಟೆ, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ (ಐಸಿಡಿಎಸ್‌) ಆಹಾರ ಪೊಟ್ಟಣಗಳು, ರಬ್ಬರ್‌, ಕಾಗದ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯ ವಸ್ತುಗಳ ಮೇಲಿನ ತೆರಿಗೆ ದರವನ್ನು ಶೇ 5ಕ್ಕೆ ಇಳಿಸಲಾಗಿದೆ.  ಕೆಲವು ಸೇವೆಗಳು ಮತ್ತು ಕೈಕೆಲಸಗಳನ್ನೂ ಈ ವ್ಯಾಪ್ತಿಗೆ ತರಲಾಗಿದ್ದು, ಜರಿ ಕಟ್ಟುವುದು, ಗಿಲೀಟು ಆಭರಣಗಳು, ಮುದ್ರಣ ಕೆಲಸಗಳೂ ಕೂಡ ಶೇ.5ರ ತೆರಿಗೆ ವಿಭಾಗಕ್ಕೆ ಸೇರಲಿವೆ.

ಇದಲ್ಲದೆ ಹೆಚ್ಚು ಕಾರ್ಮಿಕರನ್ನು ಬಳಸಿ ನಡೆಸುವ ಸರ್ಕಾರದ ನಿರ್ಮಾಣ ಯೋಜನೆಗಳ ಗುತ್ತಿಗೆಗಳನ್ನು ಕೂಡ ಶೇ.5ರ ತೆರಿಗೆ ವ್ಯಾಪ್ತಿಗೆ ತರಲಾಗಿದ್ದು, ನೀರಾವರಿ ಯೋಜನೆಗಳಂತಹ ದೊಡ್ಡ ಕಾಮಗಾರಿ ಕೂಡ ಇದರಲ್ಲಿ ಸೇರುತ್ತದೆ  ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇನ್ನು ರಾಜಿ ತೆರಿಗೆ ಪದ್ಧತಿಯ (ಕಾಂಪೊಸಿಷನ್‌ ಸ್ಕೀಮ್‌) ಮಿತಿಯನ್ನು ರು.75 ಲಕ್ಷದಿಂದ ರು.1 ಕೋಟಿಗೆ ಏರಿಸಲಾಗಿದ್ದು, ಈ ಪದ್ಧತಿ ವ್ಯಾಪ್ತಿಯಲ್ಲಿ ಬರುವವರು ಜಿಎಸ್‌ ಟಿ ಲೆಕ್ಕ ಸಲ್ಲಿಕೆಯ ಸುದೀರ್ಘ ಪ್ರಕ್ರಿಯೆಯನ್ನು ಅನುಸರಿಸುವ  ಅಗತ್ಯ ಇಲ್ಲ ಎಂದು ಹೇಳಲಾಗಿದೆ. ಅದರ ಬದಲಿಗೆ ವಹಿವಾಟಿನ ಶೇ.1ರಿಂದ ಶೇ.5ರಷ್ಟು ತೆರಿಗೆ ಪಾವತಿಸಿದರೆ ಸಾಕು. ವರ್ತಕರಿಗೆ ಶೇ.1, ತಯಾರಕರಿಗೆ ಶೇ.2 ಮತ್ತು ಹೋಟೆಲುಗಳಿಗೆ ಶೇ.5ರಷ್ಟು ತೆರಿಗೆ ಅನ್ವಯವಾಗುತ್ತದೆ  ಎಂದು ತಿಳಿದುಬಂದಿದೆ. ಆದರೆ ಸೇವೆ ಒದಗಿಸುವವರು ರಾಜಿ ತೆರಿಗೆ ಪದ್ಧತಿ ವ್ಯಾಪ್ತಿಗೆ ಬರುವುದಿಲ್ಲ.

ಒಂದು ಕೋಟಿ ರು.ವಹಿವಾಟು ಹೊಂದಿರುವ ಸಣ್ಣ ಮತ್ತು ಮಧ್ಯಮ ಉದ್ಯಮ (ಎಸ್‌ಎಂಇ) ಗಳು ಮತ್ತು 1.5ಕೋ.ರೂ.ಗೂ ಕಡಿಮೆ ವಹಿವಾಟು ಹೊಂದಿರುವ ಶೇ.90ರಷ್ಟು ವ್ಯಾಪಾರಿಗಳು ಮತ್ತು ಸೇವೆಗಳ ಪೂರೈಕೆದಾರರು  ತ್ರೈಮಾಸಿಕ ರಿಟರ್ನ್‌ಗಳನ್ನು ಸಲ್ಲಿಸಬಹುದು. ಜುಲೈ ತಿಂಗಳ ರಫ್ತುಗಳಿಗೆ ಅ.10ರೊಳಗೆ ಮತ್ತು ಆಗಸ್ಟ್ ತಿಂಗಳ ರಫ್ತುಗಳಿಗೆ ಅ.18ರೊಳಗೆ ಮರುಪಾವತಿ ಚೆಕ್‌ಗಳನ್ನು ಸಿದ್ಧ ಪಡಿಸಲಾಗುವುದು. ಪ್ರತಿ ರಫ್ತುದಾರನಿಗೂ ಒಂದು  ಇ-ವ್ಯಾಲೆಟ್ ಇರಲಿದ್ದು, ಮುಂಗಡ ಮರುಪಾವತಿಯಾಗಿ ಸಾಂಕೇತಿಕ ಮೊತ್ತವನ್ನು ನೀಡಲಾಗುವುದು. ಇದು 2018, ಎಪ್ರಿಲ್ 1ರಿಂದ ಆರಂಭಗೊಳ್ಳಲಿದೆ ಎಂದು ಜೇಟ್ಲಿ ತಿಳಿಸಿದರು. ಅಂತೆಯೇ ರಫ್ತುಗಳ ಮೇಲೆ ಸಾಂಕೇತಿಕ  ಶೇ.0.1ರಷ್ಟು ಜಿಎಸ್‌ಟಿ ವಿಧಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com