ರೈತರಿಗೆ ಹೆಚ್ಚಿನ ಆದಾಯ ದೊರಕಿಸಲು ಕೇಂದ್ರದಿಂದ ಕ್ರಮ: ಪ್ರಧಾನಿ ಮೋದಿ

ನಮ್ಮ ದೇಶದ ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ...
ದ್ವಾರಕಾದಲ್ಲಿ ಓಖ ಮತ್ತು ಬೆಟ್ ದ್ವಾರಕಾದ ನಡುವೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ
ದ್ವಾರಕಾದಲ್ಲಿ ಓಖ ಮತ್ತು ಬೆಟ್ ದ್ವಾರಕಾದ ನಡುವೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ

ದ್ವಾರಕಾ: ನಮ್ಮ ದೇಶದ ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.

ದ್ವಾರಕಾದಲ್ಲಿ ಓಖ ಮತ್ತು ಬೆಟ್ ದ್ವಾರಕಾದ ನಡುವೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದರಿಂದ ಆರ್ಥಿಕ ಚಟುವಟಿಕೆಗಳು ಮತ್ತು ಅಭಿವೃದ್ಧಿ ಕಾರ್ಯಗಳು ಹೆಚ್ಚಾಗುತ್ತವೆ. ದೇಶದಲ್ಲಿರುವ ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ. 
ವಿಶ್ವದ ಗಮನ ಇದೀಗ ಭಾರತದ ಮೇಲಿದೆ. ಭಾರತದಲ್ಲಿ ಹೂಡಿಕೆ ಮಾಡಲು ಇದೀಗ ವಿದೇಶಗಳಿಂದ ಬರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಭಾರತದ ಜನತೆಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ. ದೇಶದ ಅಭಿವೃದ್ಧಿಗೆ ಗುಜರಾತ್ ರಾಜ್ಯದ ಕೊಡುಗೆ ಅಪಾರವಾದದ್ದು. ಗುಜರಾತ್ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. 

ದೀಪಾವಳಿ ಎಂದರೆ ಬೆಳಕಿನ ಹಬ್ಬ. ಈ ಬಾರಿಯ ಸರಕು ಮತ್ತು ಸೇವಾ ತೆರಿಗೆ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರಗಳಿಂದ ಈ ಬಾರಿಯ ದೀಪಾವಳಿ ಹಬ್ಬ ಅತ್ಯಂತ ಮುಂಚಿತವಾಗಿ ಬಂದಿದೆ. ದೀಪಾವಳಿ ಹಬ್ಬ ವ್ಯಾಪಾರಿಗಳಿಗೆ ಹಾಗೂ ಉದ್ಯಮಿಗಳಿಗೆ ಶುಭಕರ ದಿನವಾಗಿದೆ. ಮೂರು ತಿಂಗಳಲ್ಲಿ ಜಿಎಸ್'ಟಿ ಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಕುರಿತಂತೆ ಅಧ್ಯಯನ ಮಾಡುವುದಾಗಿ ನಾವು ಈ ಹಿಂದೆಯೇ ಹೇಳಿದ್ದೆವು. ಇದರಂತೆ ಜಿಎಸ್'ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಂಡೆವು. 

ಸರ್ಕಾರದ ಮೇಲೆ ನಂಬಿಕೆ ಇಟ್ಟ ಬಳಿಕ, ಉತ್ತಮವಾದ ಉದ್ದೇಶದೊಂದಿಗೆಯೇ ನಾವು ನಿರ್ಧಾರಗಳನ್ನು ಕೈಗೊಳ್ಳತ್ತೇವೆ. ದೇಶದ ಉನ್ನತಿಗಾಗಿ ಜನರು ನಮಗೆ ಬೆಂಬಲ ನೀಡುವುದು ಸಾಮಾನ್ಯವಾಗಿದೆ. ಸಾಮಾನ್ಯ ಜನರು ದೇಶದ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ತಮ್ಮ ಮಕ್ಕಳು ಬಡತನದಲ್ಲಿ ಜೀವನ ನಡೆಸುವುದನ್ನು ಯಾರೂ ಇಷ್ಟಪಡುವುದಿಲ್ಲ. ಜನರ ಕನಸನ್ನು ನನಸು ಮಾಡಲು ನಾವು ಇಚ್ಛಿಸಿದ್ದೇವೆ. ಬಡತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. 

ಕಡಲು ಶೋಧನೆ ನಾವು ಅತ್ಯಂತ ಹತ್ತಿರದಿಂದ ನೋಡುತ್ತಿರುವ ವಲಯವಾಗಿದ್ದು, ಕಡಲು ತೀರ ಭದ್ರತಾ ಉಪಕರಣಗಳನ್ನು ಆಧುನೀಕರಣಗೊಳಿಸುತ್ತಿದ್ದೇವೆ. ದೇವಭೂಮಿಯಾಗಿರುವ ದ್ವಾರಕಾದಲ್ಲಿಯೇ ಇದರ ಘಟಕವನ್ನು ಸ್ಥಾಪಿಸಲಿದ್ದೇವೆ. ಇದು ದೇಶದ ಜನತೆ ಹಾಗೂ ತಜ್ಞರ ಗಮನವನ್ನು ಸೆಳೆಯಲಿದೆ. 

ಮೀನುಗಾರರ ಸಬಲೀಕರಣಕ್ಕಾಗಿ ಭಾರತ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮ ದೇಶದ ಮೀನುಗಾರರು ಬಡತನದಲ್ಲಿ ಜೀವನ ನಡೆಸುವುದು ನಮಗೆ ಇಷ್ಟವಿಲ್ಲ. ಮೀನುಗಾರರಿಗೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲು ಶ್ರಮ ಪಡಲಾಗುತ್ತಿದೆ. ಬಂದರುಗಳು ಅಭಿವೃದ್ಧಿಗೊಳ್ಳಬೇಕಿದೆ. ಭಾರತದ ಪ್ರಗತಿಗೆ ನೀಲಿ ಆರ್ಥಿಕತೆ ಸಹಾಯಕವಾಗಲಿದೆ.

ಮೀನುಗಾರರ ಜೀವನಗಳು ಸುಧಾರಿಸಬೇಕೆಂದರೆ ಮೊದಲು ಅವರ ಶಕ್ತಿಯನ್ನು ಹೆಚ್ಚಿಸಬೇಕು. ಮೀನುಗಾರರಿಗೆ ಸರ್ಕಾರ ಶೀಘ್ರದಲ್ಲಿಯೇ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡಲಿದೆ. ಇದರಿಂದ ದೊಡ್ಡ ದೊಡ್ಡ ದೋಣಿಗಳನ್ನು ಖರೀದಿ ಮಾಡಲು ಅವರಿಗೆ ಸಹಾಯಕವಾಗಲಿದೆ. ಗುಜರಾತ್ ನಲ್ಲಿರುವ ಬಡವರ ಶಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ. ದ್ವಾರಕಾದಲ್ಲಿ ನಿರ್ಮಾಣಗೊಳ್ಳುವ ಸೇತುವೆ ಬಡವರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. 

ದ್ವಾರಕಾದಲ್ಲಿನ ಅಭಿವೃದ್ಧಿ ಕಾರ್ಯಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ದ್ವಾರಕಾದಲ್ಲಿ ಉಳಿಯಲು ಇಚ್ಛಿಸುತ್ತಾರೆ. ದ್ವಾರಕಾ ಅಭಿವೃದ್ಧಿ ಕಾರ್ಯಗಳಿಂದ ಪ್ರವಾಸೋದ್ಯಮ ಬಲಿಷ್ಟಗೊಳ್ಳಲಿದೆ. ಈ ಹಿಂದಿದ್ದ ಸರ್ಕಾರ ದ್ವಾರಕಾ ಅಭಿವೃದ್ಧಿಗಾಗಿ ಏನನ್ನೂ ಮಾಡಿರಲಿಲ್ಲ. ಪ್ರಸ್ತುತ ನಿರ್ಮಾಣಗೊಳ್ಳುವ ಸೇತುವೆ ದ್ವಾರಕಾ ಅಭಿವೃದ್ಧಿಗೊಳಿಸಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com