ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸುಚೇತಗಢದ ಆರ್ ಎಸ್ ಪುರ ಸೆಕ್ಟರ್ ನಲ್ಲಿ ಅಂತರಾಷ್ಟ್ರೀಯ ಗಡಿ ನುಸುಳುತ್ತಿದ್ದ 22 ವರ್ಷದ ಪಾಕಿಸ್ತಾನಿ ಪ್ರಜೆಯನ್ನು ಮಂಗಳವಾರ ಗಡಿ ಭದ್ರತಾ ಪಡೆ(ಬಿಎಸ್ಎಫ್) ಬಂಧಿಸಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಪಾಕ್ ಪ್ರಜೆ ಅಲಿ ರಾಜಾ ಎಂದು ಗುರುತಿಸಲಾಗಿ, ಸಿಯಾಲ್ ಕೋಟ್ ನ ಪಸ್ರೂರ್ ನಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಆತನಿಂದ ಪಾಕಿಸ್ತಾನ ಕರೆನ್ಸಿ ನೋಟ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ ಮಬ್ಬುಗತ್ತಲಿನಲ್ಲಿ ತಂತಿ ಬೇಲಿ ದಾಟಿ ಭಾರತದೊಳಗೆ ನುಗ್ಗಲು ಯತ್ನಿಸಿದ್ದ ರಾಜಾನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಿಎಸ್ ಎಫ್ ಯೋಧರು ಕಳೆದ ತಿಂಗಳು ಗಡಿ ನುಸುಳುವುದಕ್ಕಾಗಿ ಕೊರೆಯಲಾಗಿದ್ದ 14 ಅಡಿ ಉದ್ದದ ಸುರಂಗ ಮಾರ್ಗವನ್ನು ಪತ್ತೆ ಹಚ್ಚುವ ಮೂಲಕ ಉಗ್ರರ ಗಡಿ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದರು.