ಆಧಾರ್ ಇಲ್ಲವೆಂಬ ಕಾರಣಕ್ಕೇ ಪಡಿತರ ನಿರಾಕರಣೆ ಮಾಡುವಂತಿಲ್ಲ: ಯುಐಡಿಎಐ ಎಚ್ಚರಿಕೆ

ಆಧಾರ್‌ ಇಲ್ಲವೆಂಬ ಒಂದೇ ಕಾರಣಕ್ಕೆ ಯಾವುದೇ ಕುಟುಂಬಕ್ಕೆ ಪಡಿತರ ನಿರಾಕರಣೆ ಮಾಡುವಂತಿಲ್ಲ ಎಂದು ವಿಶಿಷ್ಟ ಗುರುತು ಪ್ರಾಧಿಕಾರ ಸಂಸ್ಥೆ ಯುಐಡಿಎಐ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಆಧಾರ್‌ ಇಲ್ಲವೆಂಬ ಒಂದೇ ಕಾರಣಕ್ಕೆ ಯಾವುದೇ ಕುಟುಂಬಕ್ಕೆ ಪಡಿತರ ನಿರಾಕರಣೆ ಮಾಡುವಂತಿಲ್ಲ ಎಂದು ವಿಶಿಷ್ಟ ಗುರುತು ಪ್ರಾಧಿಕಾರ ಸಂಸ್ಥೆ ಯುಐಡಿಎಐ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಜಾರ್ಖಂಡ್ ನಲ್ಲಿ ನಡೆದ ಬಾಲಕಿ ಸಾವು ಪ್ರಕರಣದ ಹಿನ್ನಲೆಯಲ್ಲಿ ಮಾತನಾಡಿದ ಯುಐಡಿಎಐ ಮುಖ್ಯಸ್ಥ ಅಜಯ್ ಭೂಷಣ್ ಪಾಂಡೆ ಅವರು, ಆಧಾರ್‌ ಇಲ್ಲವೆಂಬ ಒಂದೇ ಕಾರಣಕ್ಕೆ ಯಾವುದೇ ಅರ್ಹ ಕುಟುಂಬಕ್ಕೆ  ಪಡಿತರ ಸಾಮಗ್ರಿ ನಿರಾಕರಿಸುವಂತಿಲ್ಲ ಎಂದು ಹೇಳಿದ್ದಾರೆ.
"ಆಧಾರ್‌ ನಂಬರ್‌ ಪಡೆಯುವವರೆಗೆ ಪಡಿತರ ಸೇರಿದಂತೆ ಯೋಜನೆಗಳ ಲಾಭ ಪಡೆಯಲು ಇತರ ಗುರುತು ಪತ್ರ ಬಳಸಿಕೊಳ್ಳಲು ಅವಕಾಶವಿದೆ. ಬಾಲಕಿಯ ಸಾವಿಗೆ ಸಂಬಂಧಿಸಿದಂತೆ ಜಾರ್ಖಂಡ್‌ ಸರಕಾರ ತನಿಖೆಗೆ  ಆದೇಶಿಸಿದ್ದು, ತಪ್ಪಿತಸ್ಥರ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತಹ ತಪ್ಪುಗಳು ನಡೆಯದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಪಾಂಡೆ ಹೇಳಿದರು.  ಇದೇ ವೇಳೆ ಜಾರ್ಖಂಡ್ ನ ಸಂತ್ರಸ್ಥ ಬಾಲಕಿ ಕುಟುಂಬ  2013ರಲ್ಲೇ ಆಧಾರ್ ನಂಬರ್ ಪಡೆದಿದೆ ಎಂದು ಹೇಳಿರುವ ಪಾಂಡೆ ಅವರು, ಆಧಾರ್ ಇದ್ದರೂ ಇದರ ಸೌಲಭ್ಯ ನೀಡಲು ನಿರಾಕರಿಸುವುದು ಅಪರಾಧವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು  ಹೇಳಿದರು.
ಜಾರ್ಖಂಡ್‌ ನಲ್ಲಿ ಇತ್ತೀಚೆಗೆ ಹನ್ನೊಂದು ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರ ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆರು ಸದಸ್ಯರಿದ್ದ ಬಾಲಕಿಯ ಕುಟುಂಬಕ್ಕೆ  ಆಧಾರ್‌ ಇಲ್ಲವೆಂದು ಪಡಿತರ ಸಾಮಗ್ರಿ ವಿತರಿಸಿರಲಿಲ್ಲ. ಈ ಕುಟುಂಬಕ್ಕೆ ಪಡಿತರ ನಿರಾಕರಿಸಿದವರ ವಿರುದ್ಧ ಕಠಿಣ ಕ್ರಮಕ್ಕೂ ಪ್ರಾಧಿಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com