ವಿಧಿ ಬರೆದಂತೆ ಆಗುತ್ತದೆ: ರಾಹುಲ್ ಗಾಂಧಿ

ಎಲ್ಲೇ ಹೋದರೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಆಗಾಗ ಎದುರಾಗುವ ಅತ್ಯಂತ ಹಳೆಯ ಪ್ರಶ್ನೆ...
ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ
ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ
ನವದೆಹಲಿ: ಎಲ್ಲೇ ಹೋದರೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಆಗಾಗ ಎದುರಾಗುವ ಅತ್ಯಂತ ಹಳೆಯ ಪ್ರಶ್ನೆ ನಿಮ್ಮ ಮದುವೆ ಯಾವಾಗ ಎಂಬುದು.
ನಿನ್ನೆ ಕೂಡ ಇದೇ ಪ್ರಶ್ನೆ ಅವರಿಗೆ ಮತ್ತೊಮ್ಮೆ ಎದುರಾಯಿತು. ನಿನ್ನೆ ದೆಹಲಿಯಲ್ಲಿ ಪಿಎಚ್ ಡಿ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿ ಸಮರ್ಪಕವಾಗಿಲ್ಲ, ನೋಟುಗಳ ಅನಾಣ್ಯೀಕರಣದಿಂದ ಸಾಮಾನ್ಯ ಜನರಿಗೆ ಹೇಗೆ ತೊಂದರೆಯಾಯಿತು ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಮತ್ತು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾ ಮಾತನಾಡಿದರು. 
ಉದ್ಯಮ ವಲಯದಿಂದ ಹಲವು ಪ್ರಶ್ನೆಗಳು ಎದುರಾದ ನಂತರ ಗಂಭೀರ ವಿಷಯಗಳ ಕುರಿತು ಮಾತುಕತೆ ಚರ್ಚೆಯಾದ ಬಳಿಕ ತಮಾಷೆ, ನಗುವಿನ ಪ್ರಸಂಗ ಎದುರಾಯಿತು.
ಕಾರ್ಯಕ್ರಮಕ್ಕೆ ಹಾಜರಾಗಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಎದ್ದು ನಿಂತು ಗಾಂಧಿ ಕುಡಿಯಾದ ನೀವು ಹೇಳುವ ಅತ್ಯಂತ ಹಳೆಯ ಪ್ರಶ್ನೆಯನ್ನೇ ಕೇಳುತ್ತೇನೆ ಎಂದು ಮುಂದಾದರು.
ವಿಜೇಂದರ್ ಸಿಂಗ್ ಮೊದಲಿಗೆ ರಾಜಕಾರಣಿಗಳನ್ನು ಟೀಕಿಸಿದರು. ನಾನು ಹಲವು ರಾಜಕಾರಣಿಗಳು ಕೇವಲ ರಿಬ್ಬನ್ ಕತ್ತರಿಸುವುದು ಮತ್ತು ಕಾರ್ಯಕ್ರಮಗಳನ್ನು ಉದ್ಘಾಟಿಸುವುದನ್ನು ನೋಡುತ್ತೇನೆ. ಯಾರೊಬ್ಬ ರಾಜಕಾರಣಿಯೂ ಕ್ರೀಡೆ ಆಡುವುದನ್ನು ನೋಡಿಲ್ಲ ಎಂದಾಗ ರಾಹುಲ್ ಗಾಂಧಿಯವರು ನಾನು ಆ ಸಾಲಿಗೆ ಸೇರಿಲ್ಲ, ನಾನು ವ್ಯಾಯಾಮ ಮಾಡುತ್ತೇನೆ, ಓಡುತ್ತೇನೆ, ಈಜುತ್ತೇನೆ ಮತ್ತು ಬ್ಲಾಕ್ ಬೆಲ್ಟ್ ಆಟಗಾರನಾಗಿದ್ದೇನೆ. ಆದರೆ ಈ ವಿಷಯಗಳನ್ನೆಲ್ಲ ನಾನು ಸಾರ್ವಜನಿಕರ ಮುಂದೆ ಮಾತನಾಡುವುದಿಲ್ಲ. ನನ್ನ ಜೀವನದಲ್ಲಿ ಕ್ರೀಡೆಗೆ ವಿಶೇಷ ಸ್ಥಾನವಿದೆ ಎಂದರು.
ಆದರೆ ವಿಜೇಂದರ್ ಸಿಂಗ್ ತಮ್ಮ ಪ್ರಶ್ನೆಯನ್ನು ಅಲ್ಲಿಗೇ ನಿಲ್ಲಿಸಲಿಲ್ಲ. ನಾನು ಮತ್ತು ನನ್ನ ಪತ್ನಿ ಯಾವಾಗಲೂ ಕೇಳುತ್ತಿರುತ್ತೇವೆ ಮತ್ತು ಮಾತನಾಡುತ್ತಿರುತ್ತೇವೆ, ರಾಹುಲ್ ಭಾಯಿ ಮದುವೆಯಾಗುವುದು ಯಾವಾಗ ಎಂದು, ಉತ್ತರ ಕೊಡಿ ಎಂದು ಕೇಳಿದಾಗ ಕುಳಿತಿದ್ದ ಪ್ರೇಕ್ಷಕರಿಂದ ಹೌದಾದು ತಮಗೆ ಉತ್ತರ ಬೇಕು ಎಂದು ಕೂಗಿದರು.
ಆಗ ರಾಹುಲ್ ಗಾಂಧಿಯವರು ವೇದಿಕೆಯಲ್ಲಿ ಅಡ್ಡಾಡುತ್ತಾ ಆತ್ಮವಿಶ್ವಾಸದಿಂದ ಇದೊಂದು ಹಳೆಯ ಪ್ರಶ್ನೆ, ಆಗಾಗ ಕೇಳಿಬರುತ್ತಲೇ ಇರುತ್ತದೆ ಎಂದರು.
ಆದರೆ ವಿಜೇಂದರ್ ಸಿಂಗ್ ಮತ್ತು ನೆರೆದಿದ್ದ ಸಭಿಕರು ಬಿಡಲಿಲ್ಲ. ನಿಮ್ಮ ವಿವಾಹಕ್ಕಾಗಿ ದೇಶದ ಜನತೆ ಕಾಯುತ್ತಿದ್ದಾರೆ. ನೀವು ಪ್ರಧಾನಿಯಾದ ಬಳಿಕ ವಿವಾಹವಾಗುತ್ತೀರಾ ಎಂದು ಪ್ರಶ್ನಿಸಿದರು.
ನಾನು ವಿಧಿಯ ಮೇಲೆ ನಂಬಿಕೆಯಿಟ್ಟವನು. ನನ್ನ ವಿವಾಹ ಯಾವಾಗ ಆಗಬೇಕೆಂದು ಬರೆದಿದೆಯೋ ಅಂದೇ ಆಗುತ್ತದೆ ಎಂದು ರಾಹುಲ್ ಗಾಂಧಿ ಉತ್ತರ ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com