ಕರ್ನಾಟಕಕ್ಕೆ ಪ್ರಧಾನಿ ಮೋದಿ: ಶ್ರೀಕ್ಷೇತ್ರ ದರ್ಶನ ಸೇರಿದಂತೆ ಒಂದೇ ದಿನ ನಾಲ್ಕು ಕಾರ್ಯಕ್ರಮದಲ್ಲಿ ಭಾಗಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಒಂದೇ ದಿನ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಒಂದೇ ದಿನ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ 10.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ ನಲ್ಲಿ ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ ತೆರಳುವರು. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ರಸ್ತೆ  ಮೂಲಕ 11.40ಕ್ಕೆ ಉಜಿರೆಗೆ ಬಂದು ಸಮಾವೇಶದಲ್ಲಿ ಭಾಗಿಯಾಗುವರು. ಮಧ್ಯಾಹ್ನ 12.50ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು 1.10ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ.
ಪ್ರಮುಖವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರು, ಬೆಳಗ್ಗೆ 11 ಗಂಟೆಗೆ ಶ್ರೀ ಮಂಜುನಾಥನ ದರ್ಶನ ಪಡೆಯಲಿದ್ದಾರೆ. ದೇಗುಲದಲ್ಲಿ ಮಂಜುನಾಥ ಸ್ವಾಮಿಗೆ ನಡೆಯುವ ರುದ್ರಾಭಿಷೇಕವನ್ನು ಪ್ರಧಾನಿ  ಮೋದಿ ಕಣ್ತುಂಬಿಕೊಳ್ಳಲ್ಲಿದ್ದಾರೆ. ನಂತರ ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಬಳಿಕ  ಬೆಂಗಳೂರು ಹಾಗೂ ಬೀದರ್‌ನಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ನರೇಂದ್ರಮೋದಿ ರ್ಯಾಲಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣದ ಮೂಲಕ  ಬೆಂಗಳೂರಿಗೆ ಬರಲಿರುವ ಮೋದಿಯವರ ಸ್ವಾಗತಕ್ಕಾಗಿ ನಗರ ಬಿಜೆಪಿ ವತಿಯಿಂದ ಎಚ್‌ಎಎಲ್‌ ವಿಮಾನ ನಿಲ್ದಾಣದ ಸಮೀಪದಲ್ಲಿ ಸಾರ್ವಜನಿಕ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ  ಅರಮನೆ ಮೈದಾನದಲ್ಲಿ ಸೌಂದರ್ಯಲಹರಿ ಪಾರಾಯಣ ಮಹಾಸಮರ್ಪಣೆ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಬಳಿಕ ಸಂಜೆ 6 ಗಂಟೆಗೆ ಬೀದರ್‌ ರೈಲು ನಿಲ್ದಾಣದಲ್ಲಿ  ಬೀದರ್‌-ಕಲಬುರಗಿ ಹೊಸ ರೈಲ್ವೆ ಮಾರ್ಗಕ್ಕೆ ಹಸಿರು  ನಿಶಾನೆ ತೋರಲಿದ್ದಾರೆ. ಸಂಜೆ 7.30 ಕ್ಕೆ ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಬೀದರ್-ಕಲಬುರಗಿ ರೈಲು ಮಾರ್ಗ  ನರೇಂದ್ರಮೋದಿಯವರು ಲೋಕಾರ್ಪಣೆ ಮಾಡುತ್ತಿದ್ದು,ಬೀದರ- ಕಲಬುರಗಿ ರೈಲು ಮಾರ್ಗ ಉತ್ತರ ಮತ್ತು ದಕ್ಷಿಣ ಭಾರತವನ್ನು  ಬೆಸೆಯಲಿರುವ ಹಿನ್ನೆಯಲ್ಲಿ ಹೆಚ್ಚು ಮಹತ್ವ ಪಡೆದಿದೆ. ಈ ರೈಲು ಮಾರ್ಗದಿಂದ ದಕ್ಷಿಣ ಮತ್ತು ಉತ್ತರ ಭಾರತದ ನಡುವಿನ 350ಕ್ಕೂ ಹೆಚ್ಚು ಕಿ.ಮೀ. ಅಂತರ (4 ಗಂಟೆ ಸಮಯ ಕಡಿಮೆ) ತಗ್ಗಬಹುದೆಂದು ಅಂದಾಜಿಸಲಾಗಿದೆ. ದಕ್ಷಿಣ  ಭಾರತದ ರಾಜ್ಯಗಳ ರಾಜಧಾನಿಗಳಾದ ಬೆಂಗಳೂರು, ಚೆನ್ನೈ ಮತ್ತು ರಾಷ್ಟ್ರದ ರಾಜಧಾನಿ ನವದೆಹಲಿಯ ನಡುವಿನ ಅಂತರವನ್ನು ಕಡಿಮೆ ಮಾಡಿದಂತಾಗಿದೆ. ಅಷ್ಟೇ ಅಲ್ಲ ಈ ಹೊಸ ಮಾರ್ಗದಿಂದ ಬೀದರ್ ನಿಂದ ಮಹಾರಾಷ್ಟ್ರದ  ಮುಂಬೈಗೆ ಸಹ 115 ಕಿ.ಮೀ. ನಷ್ಟು ಪ್ರಯಾಣ ಹಾಗೂ ಬೀದರ್-ಬೆಂಗಳೂರು ಪ್ರಯಾಣ ಸಹ 52 ಕಿ.ಮೀ. ತಗ್ಗುವ ಮೂಲಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಪ್ರಧಾನಿಯಾದ ಬಳಿಕ ಮೊದಲ ಭೇಟಿ
ಇನ್ನು ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಧರ್ಮಸ್ಥಳದಲ್ಲಿ ಮಂಜುನಾಥೇಶ್ವರ ದರ್ಶನದ ನಂತರ ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com