ಮೋದಿ ಸಂಪುಟ ಪುನಾರಚನೆ ಬೆನ್ನಲ್ಲೇ ರಕ್ಷಣಾ ಖಾತೆ ಗೊಂದಲ ಮುಂದುವರಿಕೆ!

ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿರುವಂತೆಯೇ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಕ್ಷಣಾ ಸಚಿವಾಲಯದ ಸಂಪೂರ್ಣ ಜವಾಬ್ದಾರಿ ವಿಚಾರದಲ್ಲಿನ ಗೊಂದಲ ಮತ್ತೆ ಮುಂದುವರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿರುವಂತೆಯೇ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಕ್ಷಣಾ ಸಚಿವಾಲಯದ ಸಂಪೂರ್ಣ ಜವಾಬ್ದಾರಿ ವಿಚಾರದಲ್ಲಿನ ಗೊಂದಲ ಮತ್ತೆ ಮುಂದುವರೆದಿದೆ.
ಮೋದಿ ಸಂಪುಟ ಪುನಾರಚನೆ ಹೊರತಾಗಿಯೂ ಮಹತ್ವದ ರಕ್ಷಣಾ ಖಾತೆ ವಹಿಸಿಕೊಳ್ಳಲು ಕೇಂದ್ರದ ಹಿರಿಯ ಸಚಿವರೇ ನಕಾರಾ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಗೋವಾ ವಿಧಾನಸಭೆ ಚುನಾವಣೆ ಬಳಿಕ ಮನೋಹರ್ ಪರಿಕ್ಕರ್ ಅವರು ತಮ್ಮ ರಕ್ಷಣಾ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ರಕ್ಷಣಾ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಆದರೆ ರಕ್ಷಣಾ ಖಾತೆಗೇ ಪ್ರತ್ಯೇಕ ಸಚಿವರ ಅವಶ್ಯಕತೆ ಇದ್ದು, ಹೀಗಾಗಿ ಇಂದು ನಡೆಯುತ್ತಿರುವ ಸಂಪುಟ ಪುನಾರಚನೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಭಾನುವಾರ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಿಗದಿಯಾಗಿದ್ದರೂ, ರಕ್ಷಣಾ ಖಾತೆಯನ್ನು ಯಾರಿಗೆ ವಹಿಸಬೇಕು ಎಂಬ ಗೊಂದಲ ಶನಿವಾರ ರಾತ್ರಿಯವರೆಗೆ ಮುಂದುವರಿದಿತ್ತು. ಪುನರ್‌ ರಚನೆ ವೇಳೆ ಹಿರಿಯ ಸಚಿವರೊಬ್ಬರಿಗೆ ವಹಿಸುವ ನಿಟ್ಟಿನಲ್ಲಿ ವರಿಷ್ಠರು ಶನಿವಾರ ರಾತ್ರಿವರೆಗೆ ಮೂರು ಸುತ್ತಿನ ಮಾತುಕತೆ ನಡೆಸಿದರು. ಹಿರಿಯ ಸಚಿವರಾದ ರಾಜನಾಥ ಸಿಂಗ್‌, ಸುಷ್ಮಾ ಸ್ವರಾಜ್‌, ನಿತಿನ್‌ ಗಡ್ಕರಿ, ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಸಭೆ ನಡೆಯಿತು. ಆದರೆ, ರಕ್ಷಣಾ ಖಾತೆಯ ಬಗ್ಗೆ ಅನೇಕರು ನಿರಾಸಕ್ತಿ ತಾಳುತ್ತಿರುವುದರಿಂದ ಗೊಂದಲ ಮುಂದುವರಿದಿದೆ ಎಂದು ಹೇಳಲಾಗಿದೆ.
ಇನ್ನು ಸಂಪುಟದ ಹಿರಿಯ ಸಚಿವರು ರಕ್ಷಣಾ ಖಾತೆ ಬಗ್ಗೆ ನಿರಾಸಕ್ತಿ ಹೊಂದಿದ್ದು, ನಿತಿನ್ ಗಡ್ಕರಿ ಅವರು ಉಸ್ತುವಾರಿ ಹೊರಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಆದರೆ ಪೂರ್ಣ ಪ್ರಮಾಣದ ಸಚಿವನಾಗಲು ಸಾಧ್ಯವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. "ಹೆಚ್ಚುವರಿಯಾಗಿ ರಕ್ಷಣಾ ಖಾತೆ ನೀಡಿದರೆ ನಿರ್ವಹಿಸಲು ಸಿದ್ಧ" ಆದರೆ ‘ಪೂರ್ಣ ಪ್ರಮಾಣದಲ್ಲಿ ರಕ್ಷಣಾ ಖಾತೆಯೊಂದನ್ನೇ ನಿರ್ವಹಿಸಬೇಕು’ ಎಂಬ ವರಿಷ್ಠರ ಸಲಹೆಯನ್ನು ಗಡ್ಕರಿ ತಳ್ಳಿ ಹಾಕಿದ್ದಾರೆ ಎಂದು ಹೇಳಲಾಗಿದೆ.
ಏತನ್ಮಧ್ಯೆ ಮಥುರಾ ಪ್ರವಾಸದಿಂದ ಸಂಜೆ ದೆಹಲಿಗೆ ವಾಪಸಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಪ್ರಧಾನಿ ಮೋದಿ ಜೊತೆ ರಾತ್ರಿ 8ರಿಂದ 9ರವರೆಗೆ ಚರ್ಚೆ ನಡೆಸಿದ ಬಳಿಕ ಪುನರ್‌ ರಚನೆಯ ಕಸರತ್ತನ್ನು ಪೂರ್ಣಗೊಳಿಸಿದ್ದು, ಒಂಭತ್ತು ಜನರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಕೇಂದ್ರ ಸಂಪುಟಕ್ಕೆ 9 ಮಂದಿ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ.
ಅಂತೆಯೇ ಸಚಿವರಾದ ಉಮಾ ಭಾರತಿ, ಕಲರಾಜ್‌ ಮಿಶ್ರಾ, ಬಂಡಾರು ದತ್ತಾತ್ರೇಯ, ರಾಜೀವ್‌ ಪ್ರತಾಪ್‌ ರೂಡಿ ಸೇರಿದಂತೆ 7 ಸಚಿವರಿಂದ ರಾಜೀನಾಮೆ ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ಸಚಿವರಿಗೆ ಬಡ್ತಿ ನೀಡುವ ಸಾಧ್ಯತೆ ಇದೆ. ಇದೇ ವೇಳೆ ಜೆಡಿಯು ಸೇರಿದಂತೆ ಹಲವು ಮಿತ್ರಪಕ್ಷಗಳಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಈ ಬಾರಿ ಬಿಜೆಪಿ ಸಂಸದರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com