ವಿಮಾನದಲ್ಲಿ ಅಶಿಸ್ತು ತೋರಿಸಿದರೆ ಜೋಕೆ: ಎರಡು ವರ್ಷಗಳವರೆಗೆ ಪ್ರಯಾಣಕ್ಕೆ ನಿಷೇಧ!

ವಿಮಾನದಲ್ಲಿ ಪ್ರಯಾಣಿಸುವಾಗ ದುರ್ವರ್ತನೆ,ಅಶಿಸ್ತು ತೋರಿಸಿದರೆ ಅಶಿಸ್ತಿನ ಸ್ವರೂಪವನ್ನು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವಾಗ ದುರ್ವರ್ತನೆ,ಅಶಿಸ್ತು ತೋರಿಸಿದರೆ ಅಶಿಸ್ತಿನ ಸ್ವರೂಪವನ್ನು ಆಧರಿಸಿ ಮೂರು ತಿಂಗಳಿನಿಂದ ಎರಡು ವರ್ಷಗಳವರೆಗೆ ಪ್ರಯಾಣ ನಿಷೇಧಿಸುವ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ಏರ್ ಇಂಡಿಯಾ ವಿಮಾನದಲ್ಲಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲದಿರುವ ಅಶಿಸ್ತಿನ ಪ್ರಯಾಣಿಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಹಾರಾಟ ಮಾಡಲು ಸಾಧ್ಯವಾಗದಿರುವ ಪಟ್ಟಿ ವಿದೇಶಿ ಪ್ರಯಾಣಿಕರಿಗೆ ಕೂಡ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಮೌಖಿಕ, ದೈಹಿಕ ಮತ್ತು ಜೀವ ಬೆದರಿಕೆ ಎಂದು ಪ್ರಯಾಣಿಕರ ಅಶಿಸ್ತಿನ ವರ್ತನೆಯನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
ವಿಮಾನದಲ್ಲಿ ಇತರ ಪ್ರಯಾಣಿಕರ, ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಯಾಣಿಸಲು ಸಾಧ್ಯವಾಗದಿರುವ ಪ್ರಯಾಣಿಕರ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಮತ್ತು ಕೇವಲ ಭದ್ರತಾ ಬೆದರಿಕೆಯನ್ನೊಳಗೊಂಡಂತೆ ಮಾತ್ರವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮೂರು ಹಂತಗಳು ಇಂತಿವೆ:
ಮೊದಲ ಹಂತದಲ್ಲಿ ಬಾಯಿಮಾತಿನಲ್ಲಿ ಪ್ರಯಾಣಿಕರು ಸಹ ಪ್ರಯಾಣಿಕರಿಗೆ ಬೈದರೆ, ಕಿರುಕುಳದ ಮಾತುಗಳನ್ನಾಡಿದರೆ, ಅಶಿಸ್ತು ತೋರಿಸಿದರೆ ಮೂರು ತಿಂಗಳವರೆಗೆ ಅವರಿಗೆ ಪ್ರಯಾಣಕ್ಕೆ ನಿಷೇಧ ಹೇರಬಹುದು.

ಎರಡನೇ ಹಂತದಲ್ಲಿ ಶಾರೀರಿಕವಾಗಿ ಸಹ ಪ್ರಯಾಣಿಕರನ್ನು ಹೊಡೆಯುವುದು, ದೂಡುವುದು, ಒದೆಯುವುದು ಇತ್ಯಾದಿಗಳನ್ನು ಮಾಡಿದರೆ 6 ತಿಂಗಳವರೆಗೆ ಪ್ರಯಾಣಕ್ಕೆ ನಿಷೇಧ ಹೇರಬಹುದು.

ಮೂರನೇ ಹಂತದಲ್ಲಿ ಜೀವಕ್ಕೆ ಬೆದರಿಕೆಯನ್ನುಂಟುಮಾಡುವ ವರ್ತನೆ, ವಿಮಾನದ ಉಪಕರಣಗಳಿಗೆ ಹಲ್ಲೆ ಮಾಡುವ ವರ್ತನೆ ತೋರಿಸಿದವರೆಗೆ ಕನಿಷ್ಟ 2 ವರ್ಷದಿಂದ ಗರಿಷ್ಟ ಎಷ್ಟು ವರ್ಷಗಳವರೆಗೂ ನಿಷೇಧ ಹೇರಬಹುದು.

ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮವನ್ನು ಭಾರತದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತರಲಾಗಿದೆ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com