ದೇಶ
ಗುರುಗಾಂವ್ ವಿದ್ಯಾರ್ಥಿ ಹತ್ಯೆ ಪ್ರಕರಣ: ಶಾಲೆಗಳು ಸ್ಮಶಾನಗಳಾಗಬಾರದು- ಕಾಂಗ್ರೆಸ್
ರಿಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದ 7 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಹಲವೆಡೆ ಆಕ್ರೋಶಗಳು ವ್ಯಕ್ತವಾಗತೊಡಗಿದ್ದು, ಶಾಲೆಗಳು ಸ್ಮಶಾನಗಳಾಗಬಾರದು ಎಂದು ಕಾಂಗ್ರೆಸ್ ಶನಿವಾರ ಹೇಳಿದೆ...
ನವದೆಹಲಿ: ರಿಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದ 7 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಹಲವೆಡೆ ಆಕ್ರೋಶಗಳು ವ್ಯಕ್ತವಾಗತೊಡಗಿದ್ದು, ಶಾಲೆಗಳು ಸ್ಮಶಾನಗಳಾಗಬಾರದು ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು, ಘಟನೆ ನಿಜಕ್ಕೂ ಸಾಕಷ್ಟು ಆಘಾತವನ್ನು ತಂದಿದೆ. ಮುಗ್ಧ ಮಕ್ಕಳು ಶಾಲೆಗಳಲ್ಲಿ ಹತ್ಯೆಗೀಡಾಗುತ್ತಿದ್ದಾರೆ. ಪೊಲೀಸರು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ನಾಯಕ ಟಾಮ್ ವಡಕ್ಕನ್ ಅವರು ಮಾತಾಡಿ, ಹರಿಯಾಣ ಪೊಲೀಸರು ಕೂಡಲೇ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಶಾಲೆಗಳು ಸುರಕ್ಷಿತವಾಗಿಸುತ್ತವೆ, ಶಾಲಾ ಆಡಳಿತ ಮಂಡಳಿಗಳು ಜವಾಬ್ದಾರಿ ತೆಗೆದುಕೊಳ್ಳುತ್ತಾರೆಂಬ ನಂಬಿಕೆಗಳ ಮೇಲೆ ತಮ್ಮ ಪ್ರೀತಿಪಾತ್ರರಾದ ಮಕ್ಕಳನ್ನು ಪೋಷಕರು ಶಾಲೆಗಳಿಗೆ ಕಳುಹಿಸುತ್ತಾರೆ. ಇದನ್ನು ಶಾಲಾ ಆಡಳಿತ ಮಂಡಳಿಗಳು ನೆನೆಯಬೇಕಿದೆ. ಆದರೆ, ಶಾಲೆಗಳೇ ಸ್ಮಶಾನವಾಗಿ ಹೋಗುತ್ತಿರುವುದು ನಿಜಕ್ಕೂ ಬೇಸರವನ್ನುಂಟು ಮಾಡುತ್ತಿದೆ ಎಂದಿದ್ದಾರೆ.
ಶಾಲೆಗೆ ಹೋಗಿದ್ದ 2ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕನ ಕತ್ತು ಸೀಳಿ ನಿನ್ನೆಯಷ್ಟೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು.