ತನ್ನ ರಾಜಕೀಯ ವೈಫಲ್ಯವನ್ನು ಅಮೆರಿಕಾದಲ್ಲಿ ಅನಾವರಣಗೊಳಿಸಿದ ರಾಹುಲ್ ಗಾಂಧಿ: ಸ್ಮೃತಿ ಇರಾನಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲ ರಾಜಕಾರಣಿಯಾಗಿದ್ದು, ತಮ್ಮ ರಾಜಕೀಯ ವೈಫಲ್ಯತೆಯನ್ನು ಅಮೆರಿಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲ ರಾಜಕಾರಣಿಯಾಗಿದ್ದು, ತಮ್ಮ ರಾಜಕೀಯ ವೈಫಲ್ಯತೆಯನ್ನು ಅಮೆರಿಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬರ್ಕ್ ಲೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂವಾದ ಕಾರ್ಯಕ್ರಮ ಕುರಿತಂತೆ  ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಅವರನ್ನು ಓರ್ವ ವಿಫಲ ರಾಜಕಾರಣಿ ಎಂದು ಜರಿದಿದ್ದಾರೆ.

"ರಾಜಕೀಯದಲ್ಲಿ ಸೋತ ರಾಹುಲ್ ಗಾಂಧಿ ವಿದೇಶಗಳಲ್ಲೂ ಸುಳ್ಳು ಹೇಳಲು ಆರಂಭಿಸಿದ್ದಾರೆ. ಬಿಜೆಪಿ ಪಕ್ಷ ಯಾವುದೋ ಒಂದು ರಾಜಕೀಯ ವಂಶಕ್ಕೆ ಸೀಮಿತವಾದ ಪಕ್ಷವಲ್ಲ. ದೇಶದ ಪ್ರಧಾನಿ ಮೋದಿ ಸಾಮಾನ್ಯ ಕುಟುಂಬದಿಂದ ಬಂದವರಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಳಿವಿನಂಚಿನ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರೈತ ಕುಟುಂಬದವರಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಯಾವುದೇ ರಾಜಕೀಯ ವಂಶದ ಕುಟುಂಬದಿಂದ  ಬಂದವರಲ್ಲ. ಬಿಜೆಪಿಯಲ್ಲಿ ಸಾಮಾನ್ಯರೇ ತಮ್ಮ ಸಾಧನೆಗಳ ಮೂಲಕ ಸಾಧಕರಾಗಿದ್ದಾರೆ ಎಂದು ಹೇಳಿದರು.

ಅಂತೆಯೇ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸ್ಮೃತಿ ಇರಾನಿ, ಸತತ ಚುನಾವಣಾ ವೈಫಲ್ಯಗಳಿಂದ ಕಾಂಗ್ರೆಸ್ ಪಕ್ಷ ಹೈರಾಣಾಗಿದ್ದು, ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ  ಅಹಂಕಾರದಿಂದ ವರ್ತಿಸುತ್ತಿದೆ. ತನ್ನ ಈ ಗುಣದಿಂದಾಗಿಯೇ ಕಾಂಗ್ರೆಸ್ ಪಕ್ಷ ದೊಡ್ಡ ದೊಡ್ಡ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿದೆ. ಹೀಗಿದ್ದೂ ಆ ಪಕ್ಷದ ಮುಖಂಡರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಭಾರತದಲ್ಲಿ ಜನ ಸಂಪರ್ಕ  ಸಾಧಿಸಲಾಗದ ರಾಹುಲ್ ಗಾಂಧಿ ಅಮೆರಿಕಕ್ಕೆ ತೆರಳಿ ಅಲ್ಲಿ ತಮ್ಮ ವಿರೋಧಿಗಳ ವಿರುದ್ಧ ಮಾತನಾಡುತ್ತಿದ್ದಾರೆ.

ಅಲ್ಲದೆ ರಾಹುಲ್ ಗಾಂಧಿ ಅವರಂತಹ ವ್ಯಕ್ತಿಗಳಿಗೆ ಪ್ರಧಾನಿ ಮೋದಿ ಅವರ ಕುರಿತಾಗಲೀ ಅಥವಾ ಜಮ್ಮು ಮತ್ತು ಕಾಶ್ಮೀರದಂತಹ ವಿಚಾರಗಳ ಬಗ್ಗೆಯಾಗಲಿ ಮಾತನಾಡುವ ನೈತಿಕತೆಯೇ ಇಲ್ಲ. ಕಾಶ್ಮೀರದ ಜನತೆಯ  ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ರಾಹುಲ್ ಗಾಂಧಿ ಮಾತನಾಡಲಿ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com