ಶಿಂಜೋ ಅಬೆ ಭಾರತ ಪ್ರವಾಸ: ಮಹತ್ವದ ಯುಎಸ್-2 ವಿಮಾನ ಖರೀದಿ ಒಪ್ಪಂದ ಅಂತಿಮ ಸಾಧ್ಯತೆ!

ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಗುಜರಾತ್ ನ ಅಹ್ಮದಾಬಾದ್ ಗೆ ಭೇಟಿ ನೀಡಿರುವ ಬೆನ್ನಲ್ಲೇ ಭಾರತದ ಮಹತ್ವಾಕಾಕ್ಷಿ ಯುಎಸ್-2 ವಿಮಾನ ಖರೀದಿ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಯುಎಸ್-2 ಯುದ್ಧ ವಿಮಾನ
ಯುಎಸ್-2 ಯುದ್ಧ ವಿಮಾನ
ಅಹ್ಮದಾಬಾದ್: ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಗುಜರಾತ್ ನ ಅಹ್ಮದಾಬಾದ್ ಗೆ ಭೇಟಿ ನೀಡಿರುವ ಬೆನ್ನಲ್ಲೇ ಭಾರತದ ಮಹತ್ವಾಕಾಕ್ಷಿ ಯುಎಸ್-2  ವಿಮಾನ ಖರೀದಿ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹತ್ವಾಕಾಕ್ಷಿ ಯುಎಸ್-2  ವಿಮಾನ ಖರೀದಿ ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದರು. ಇದೀಗ ಶಿಂಜೋ ಅಬೆ ಅವರು ಭಾರತಕ್ಕೆ  ಭೇಟಿ ನೀಡಿದ್ದು, ಈ ಭೇಟಿ ಸಂದರ್ಭದಲ್ಲೇ ಈ ಮಹತ್ವಾಕಾಂಕ್ಷಿ ಯೋಜನೆ ಅಂತಿಮ ರೂಪ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಜಪಾನ್ ನೊಂದಿಗಿನ ಒಪ್ಪಂದದಂತೆ ಭಾರತ 12 ಯುಎಸ್-2  ವಿಮಾನಗಳನ್ನು ಖರೀದಿ ಮಾಡುತ್ತಿದ್ದು, 18 ವಿಮಾನಗಳನ್ನು ಜಪಾನ್ ಸಹಯೋಗದೊಂದಿಗೆ ಭಾರತದಲ್ಲೇ ನಿರ್ಮಾಣ ಮಾಡುವಂತೆ ಒಪ್ಪಂದ ರೂಪಿಸಲಾಗಿದೆ ಎನ್ನಲಾಗಿದೆ.
ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸೇನೆಗೆ ಬಲ ತುಂಬುವುದಷ್ಟೇ ಅಲ್ಲದೇ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾಗೂ ಒತ್ತು ನೀಡಿದ್ದಾರೆ ಎಂದು ಹೇಳಲಾಗಿದೆ. ಜಪಾನ್ ಯುಎಸ್-2  ವಿಮಾನಗಳು ಯಾವುದೇ ರೀತಿಯ ಹವಾಮಾನದಲ್ಲೂ ತಡೆ ಇಲ್ಲದೇ ಹಾರಾಡಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಪ್ರಮುಖವಾಗಿ ಸಮುದ್ರದ ಮೇಲೆ ಹಾರಡಬಲ್ಲ ಮತ್ತು ಸಮುದ್ರದಲ್ಲೇ ಇಳಿಯಬಲ್ಲ ವಿಮಾನವಾಗಿದ್ದು, ಸೇನೆಯ  ಸರಕು ಸಾಗಾಣಿಕೆಗೆ ಈ ವಿಮಾನಗಳು ಬಹಳ ಉಪಕಾರಿಯಾಗಿರುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಭಾರತ ಈ ಪ್ರಬಲ ಯುದ್ಧ ವಿಮಾನಗಳನ್ನ  ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಇಂಬು ನೀಡುವಂತೆ ಭಾರತದ ಈ ಹಿಂದಿನ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ಕಳೆದ ಸೆಪ್ಟೆಂಬರ್ 5ರಂದು ನಡೆದ ಭಾರತ-ಜಪಾನ್ ವಾರ್ಷಿಕ ರಕ್ಷಣಾ ಸಚಿವರ ಭೇಟಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಜಪಾನ್ ರಕ್ಷಣಾ  ಸಚಿವ ಇಟ್ಸುನೋರಿ ಒನೊಡೆರಾ ಅವರೊಂದಿಗೆ ಚರ್ಚೆ ಮಾಡಿದ್ದರು. ಈ ವೇಳೆ ಜಪಾನ್ ಹಲವು ಶಸ್ತ್ರಾಸ್ತ್ರಗಳ ಖರೀದಿಯೊಂದಿಗೆ ಯುಎಸ್-2 ವಿಮಾನ ಖರೀದಿ ಕುರಿತೂ ಅರುಣ್ ಜೇಟ್ಲಿ ಮಾತುಕತೆ ನಡೆಸಿದ್ದರು ಎಂದು  ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com