ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ಟಿಟಿವಿ ದಿನಕರನ್ ಬಣದ 18 ಶಾಸಕರನ್ನು ಅನರ್ಹಗೊಳಿಸಿ ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.
ತಮಿಳುನಾಡು ರಾಜಕೀಯ ದಿನಕ್ಕೊಂದು ತಿರುವುಪಡೆಯುತ್ತಿದ್ದು, ಪಳನಿ ಸ್ವಾಮಿ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಹಾಗೂ ಕಲಾಪಕ್ಕೆ ಅಡ್ಡಿ ಪಡಿಸುವ ಬೆದರಿಕೆಯೊಡ್ಡುತ್ತಿರುವ ಟಿಟಿವಿ ದಿನಕರನ್ ಬೆಂಬಲಿತ 18 ಮಂದಿ ಶಾಸಕರನ್ನು ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸ್ಪೀಕರ್ ಧನಪಾಲ್ ಅವರು 1986ರ ತಮಿಳುನಾಡು ವಿಧಾನಸಭೆ ಪಕ್ಷಪಾತ ಕಾನೂನಿನ ಅಡಿಯಲ್ಲಿ ಟಿಟಿವಿ ದಿನಕರನ್ ಬೆಂಬಲಿತ ಶಾಸಕರಾದ ತಂಗ ತಮಿಳ್ ಸೆಲ್ವನ್, ಸೆಂಥಿಲ್ ಬಾಲಾಜಿ, ಪಿ ವೆಟ್ರಿವೇಲ್ ಮತ್ತು ಕೆ ಮರಿಯಪ್ಪನ್ ಸೇರಿದಂತೆ ಒಟ್ಟು 18 ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿದ್ದ ಟಿಟಿವಿ ದಿನಕರನ್ ಅವರು ತಮ್ಮ ಬೆಂಬಲಿಗ ಶಾಸಕರ ಸಹಿ ಇರುವ ಪತ್ರವನ್ನು ನೀಡಿ ಪಳನಿ ಸ್ವಾಮಿ ಸರ್ಕಾರಕ್ಕೆ ಶಾಸಕರು ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದರು. ಅಲ್ಲದೆ ಪಳನಿಸ್ವಾಮಿ ಅವರ ಆಡಳಿತದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಬಹುಮತ ಸಾಬೀತಿಗೆ ಸೂಚಿಸುವಂತೆ ಮನವಿ ಮಾಡಿದ್ದರು. ಒಂದು ವೇಳೆ ರಾಜ್ಯಪಾಲರು ಬಹುಮತಕ್ಕೆ ಆದೇಶ ನೀಡದಿದ್ದರೇ ಸರ್ಕಾರವನ್ನೇ ಉರುಳಿಸಲೂ ತಾವು ಹಿಂಜರಿಯುವುದಿಲ್ಲ ಎಂದೂ ಎಚ್ಚರಿಕೆ ನೀಡಿದ್ದರು.
18 MLAs backing TTV Dhinakaran disqualified by Tamil Nadu Assembly Speaker P. Dhanapal. pic.twitter.com/pJedJ3aOWK