ಈ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಿರುವ ಸಾಹಿತಿ ಐಲಯ್ಯ ಅವರು ನಾಲ್ಕು ಮಂದಿ ದುಷ್ಕರ್ಮಿಗಳು ತಮ್ಮ ಕಾರಿನ ಮೇಲೆ ದಾಳಿ ಮಾಡಿದರು. ತಪ್ಪಲಿಗಳನ್ನು ತೂರಿ ಹಲ್ಲೆಗೆ ಮುಂದಾದರು, ಅಲ್ಲದೆ ತಮ್ಮ ಹತ್ಯೆಗೆ ಯತ್ನಿ,ಸಿದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಹೈದರಾಬಾದ್ ನ ಅಂಬೇಡ್ಕರ್ ಚೌರಸ್ತಾ ಬಳಿ ಆರ್ಯವೈಶ್ಯ ಸಮುದಾಯದ 200 ಮಂದಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭ ಭೂಪಾಲಪಲ್ಲಿಯಲ್ಲಿ ಸಮಾರಂಭ ಮುಗಿಸಿ ಹೈದರಾಬಾದ್ಗೆ ಆಗಮಿಸುತ್ತಿದ್ದ ಐಲಯ್ಯ ಅವರ ಕಾರನ್ನು ಪ್ರತಿಭಟನಾಕಾರರು ನೋಡಿದ್ದು, ಕೂಡಲೇ ಕಾರಿನ ಮೇಲೆ ದಾಳಿ ಮುಂದಾಗಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಐಲಯ್ಯ ಅವರ ಕಾರು ಚಾಲಕ ತಕ್ಷಣ ಪರಕಲ್ ಠಾಣೆಗೆ ಕಾರನ್ನು ಕೊಂಡೊಯ್ದಿದ್ದಾನೆ ಎನ್ನಲಾಗಿದೆ.
ಠಾಣೆಯಲ್ಲಿ ಕಾಂಚ ಐಲಯ್ಯ ನಾಲ್ವರ ವಿರುದ್ಧ ದೂರು ಸಲ್ಲಿಸಿದ್ದಾರೆ. "ನನ್ನ ಕಾರಿನ ಮೇಲೆ ದಾಳಿ ಮಾಡಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರತಿಭಟನಕಾರರು ಠಾಣೆಗೂ ಹಿಂಬಾಲಿಸಿಕೊಂಡರು ಬಂದರು. ವಿಷಯ ತಿಳಿದ ದಲಿತ ಸಂಘಟನೆಗಳ ಕಾರ್ಯಕರ್ತರು ಕೂಡಾ ಸ್ಥಳಕ್ಕೆ ಧಾವಿಸಿದರು. ಉಭಯ ಸಂಘಟನೆಗಳು ಪರಸ್ಪರರ ವಿರುದ್ಧ ಘೋಷಣೆ ಕೂಗಿದಾಗ ಒಂದಷ್ಟು ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ಆರ್ಯ ವೈಶ್ಯ ಸಮಾಜದ ಕುರಿತು ಕಂಚ ಐಲಯ್ಯ ಅವರು ಬರೆದಿರುವ "ಸಾಮಾಜಿಕ ಸ್ಮಗ್ಲರ್ಲು ಕೋಮಟೋಳ್ಳು" (ವೈಶ್ಯರು ಸಾಮಾಜಿಕ ಸ್ಮಗ್ಲರ್ ಗಳು) ಪುಸ್ತಕ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸಾಹಿತಿ ಐಲಯ್ಯ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.