ಲಖನೌ: ಸದ್ಯ ಹೊಸ ಪಕ್ಷ ಘೋಷಿಸುವ ಯಾವುದೇ ಯೋಚನೆ ಇಲ್ಲ ಎಂದಿರುವ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರು, ಸಮಾಜವಾದಿ ಪಕ್ಷದ ಸಾರಥ್ಯ ವಹಿಸಿಕೊಳ್ಳುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂಬ ವರದಿಗಳನ್ನು ಸೋಮವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ನನ್ನ ನಿರ್ಧಾರಗಳನ್ನು ಒಪ್ಪದಿದ್ದರೂ, ನನ್ನ ಆರ್ಶೀವಾದ ಪುತ್ರನ ಮೇಲೆ ಇದೆ ಎಂದು ಮುಲಾಯಂ ಸಿಂಗ್ ಯಾದವ್ ಅವರು ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಲಾಯಂ ಸಿಂಗ್ ಅವರು, ಸದ್ಯ ನಾನು ಯಾವುದೇ ಹೊಸ ಪಕ್ಷ ರಚನೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
77 ವರ್ಷದ, ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಅವರು ಇಂದಿನ ಸುದ್ದಿಗೋಷ್ಠಿಯಲ್ಲಿ ಹೊಸ ಪಕ್ಷ ಘೋಷಿಸಲಿದ್ದಾರೆ ಎಂಬ ವದಂತಿಗಳಿದ್ದವು. ಆ ಎಲ್ಲಾ ವದಂತಿಗಳಿಗೆ ಮುಲಾಯಂ ಸಿಂಗ್ ಯಾದವ್ ಇಂದು ತೆರೆ ಎಳೆದಿದ್ದಾರೆ.