ಮುಂಬೈ ಪಾದಚಾರಿ ಮೇಲ್ಸೇತುವೆ ದುರಂತ: ಪುನರ್'ನಿರ್ಮಾಣಕ್ಕೆ 2015ರಲ್ಲಿಯೇ ಹಣ ಬಿಡುಗಡೆ ಮಾಡಿದ್ದ ಸುರೇಶ್ ಪ್ರಭು

22 ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಮುಂಬೈ ಪಾದಚಾರಿ ಮೇಲ್ಸೇತುವೆ ಪುನರ್ ನಿರ್ಮಾಣಕ್ಕಾಗಿ ಮಾಜಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ರೂ.11.86 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು...
ಮುಂಬೈ ಪಾದಚಾರಿ ಮೇಲ್ಸೇತುವೆ ದುರಂತ
ಮುಂಬೈ ಪಾದಚಾರಿ ಮೇಲ್ಸೇತುವೆ ದುರಂತ

ನವದೆಹಲಿ: 22 ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಮುಂಬೈ ಪಾದಚಾರಿ ಮೇಲ್ಸೇತುವೆ ಪುನರ್ ನಿರ್ಮಾಣಕ್ಕಾಗಿ ಮಾಜಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ರೂ.11.86 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು ಎಂದು ವರದಿಗಳು ತಿಳಿಸಿವೆ. 

ನಿನ್ನೆಯಷ್ಟೇ ಮುಂಬೈನ ಎಲ್'ಫಿನ್'ಸ್ಟೋನ್ ರೈಲ್ವೆ ನಿಲ್ದಾಣದ ಬಳಿ ಇರುವ ಪಾದಚಾರಿಗಳ ಮೇಲ್ಸೇತುವೆಯಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಮೇಲ್ಸೇತುವೆ ಕುಸಿದು ಬೀಳಲಿದೆ ಎಂಬ ವದಂತಿಗಳಿಗೆ ಕಿವಿಗೊಟ್ಟಿದ್ದ ಸ್ಥಳೀಯರು ಆತಂಕಗೊಂಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 22 ಮಂದಿ ಸಾವನ್ನಪ್ಪಿ, 30 ಮಂದಿ ಗಾಯಗೊಂಡಿದ್ದರು. 

ಮೇಲ್ಸೇತುವೆ ದುರ್ಬಲವಾಗಿದೆ ಎಂದು 2015 ರಲ್ಲೇ ಕೇಂದ್ರ ರೈಲ್ವೆ ಹೇಳಿತ್ತು. ಸ್ಥಳೀಯರೂ ಸಹ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ದುರಂತ ಒಂದಲ್ಲಾ ಒಂದು ದಿನ ಸಂಭವಿಸುವುದು ನಿಶ್ಚಿತ ಎಂಬ ಆತಂಕದಲ್ಲಿಯೇ ಇದ್ದರು. ಇದಲ್ಲದೆ ಹಲವರು ಮೇಲ್ಸೇತುವೆ ಕುರಿತಂತೆ ಹಲವು ಬಾರಿ ಅಧಿಕಾರಿಗಳಿಗೆ ದೂರುಗಳನ್ನೂ ನೀಡಿದ್ದಾರೆ. 

ಕೆಲ ಮೂಲಗಳು ಮಾಹಿತಿ ನೀಡಿರುವ ಪ್ರಕಾರ, ಮೇಲ್ಸೇತುವೆ ಕುರಿತಂತೆ ಬಂದಿದ್ದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ರೈಲ್ವೇ ಸಚಿವ ಸುರೇಶ್ ಪ್ರಭು ಅವರು 2015ರಲ್ಲಿಯೇ ಮೇಲ್ಸೇತುವೆ ಪುನರ್ ನಿರ್ಮಾಣ ಮಾಡುವುದಕ್ಕಾಗಿ, ಸೇತುವೆ ಅಗಲೀಕರಣ ಮಾಡುವುದಕ್ಕಾಗಿ ರೂ.11.86 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು ಎಂದು ತಿಳಿದುಬಂದಿದೆ. 

ಫೆ.20. 2016 ಮುಂಬೈನ ಶಿವಸೇನಾ ಸಂಸದ ಅರವಿಂದ್ ಸಾವಂತ್ ಅವರಿಗೆ ಸುರೇಶ್ ಪ್ರಭು ಅವರು ಪತ್ರವೊಂದರನ್ನು ಬರೆದಿದ್ದರು. ಎಲ್'ಫಿನ್'ಸ್ಟೋನ್ ರೈಲ್ವೆ ನಿಲ್ದಾಣದ ಬಳಿ 12 ಮೀಟರ್ ನೂತನ ಪಾದಚಾರಿ  ಮೇಲ್ಸೇತುವೆ ನಿರ್ಮಾಣ ಕುರಿತ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ ಎಂದು ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ. ಇದಲ್ಲದೆ, ಉತ್ತರ ವಿಭಾಗದಲ್ಲಿ 100 ಮೀಟರ್ ನಷ್ಟು ಸೇತುವೆ ವಿಸ್ತರಣೆಯನ್ನು ಪರಿಗಣಿಸಿರುವುದಾಗಿ ಇಲಾಖೆ ತಿಳಿಸಿರುವುದು ಪತ್ರದಲ್ಲಿ ಕಂಡು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com