ಸುಮಿತ್ರಾ ಮಹಾಜನ್ ಅವರಿಗೆ ರಾಜಿನಾಮೆ ಪತ್ರ ಸಲ್ಲಿಕೆ ಮಾಡಿದ ವೈಎಸ್ ಆರ್ ಕಾಂಗ್ರೆಸ್ ಸಂಸದರು
ದೇಶ
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ: ವೈಎಸ್ ಆರ್ ಕಾಂಗ್ರೆಸ್ 5 ಸಂಸದರಿಂದ ರಾಜಿನಾಮೆ
ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಆ ರಾಜ್ಯದ ಸಂಸದರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಶುಕ್ರವಾರ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಐದು ಸಂಸದರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನವದೆಹಲಿ: ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಆ ರಾಜ್ಯದ ಸಂಸದರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಶುಕ್ರವಾರ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಐದು ಸಂಸದರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸಂಸತ್ ಅಧಿವೇಶನದ ಕೊನೆಯ ದಿನವಾದ ಇಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಭೇಟಿ ಮಾಡಿದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಐದು ಸಂಸದರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಸಂಸದರಾದ ವಿ. ವರಪ್ರಸಾದ್ ರಾವ್, ವೈ.ವಿ. ಸುಬ್ಬಾ ರೆಡ್ಡಿ, ಪಿ.ವಿ. ಮಿಧುನ್ ರೆಡ್ಡಿ, ವೈ.ಎಸ್. ಅವಿನಾಶ್ ರೆಡ್ಡಿ ಮತ್ತು ಮೆಕಪತಿ ರಾಜಮೋಹನ್ ರೆಡ್ಡಿ ಅವರು ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ. ರಾಜಿನಾಮೆ ಪತ್ರವನ್ನು ಸಂಸದರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ನೀಡಿದ್ದಾರೆ.
ಇನ್ನು ತಮ್ಮ ರಾಜಿನಾಮೆ ಪತ್ರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಸದರು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ಬೇಸತ್ತು ತಾವು ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ಟಿಡಿಪಿ ಸಂಸದರಿಗೂ ರಾಜಿನಾಮೆ ಸಲ್ಲಿಸುವಂತೆ ಜಗನ್ ಸವಾಲು
ಅತ್ತ ದೆಹಲಿಯಲ್ಲಿ ತಮ್ಮ ಪಕ್ಷದ ಸಂಸದರು ರಾಜಿನಾಮೆ ಸಲ್ಲಿಕೆ ಮಾಡುತ್ತಿದ್ದಂತೆಯೇ ಇತ್ತ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿದ್ದು, ನಾವು ನುಡಿದಂತೆ ನಡೆದಿದ್ದೇವೆ. ಆಂಧ್ರ ಪ್ರದೇಶ ವಿಶೇಷ ಸ್ಥಾನಮಾನಕ್ಕಾಗಿ ನಮ್ಮ ಸಂಸದರು ರಾಜಿನಾಮೆ ನೀಡಿದ್ದಾರೆ. ಟಿಡಿಪಿ ಸಂಸದರೂ ಕೂಡ ಇದೇ ಕೆಲಸ ಮಾಡುತ್ತಾರೆಯೇ ಎಂದು ಸವಾಲೆಸೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ