

ಮೀರ್ ಪೇಟೆ : ತೆಲಂಗಾಣದ ಮೀರ್ ಪೇಟೆಯಲ್ಲಿ ಶಾಲಾ ಫೀಜ್ ಕೊಡುವಲ್ಲಿ ವಿಳಂಬವಾದ್ದರಿಂದ ನರ್ಸರಿ ವಿದ್ಯಾರ್ಥಿಯನ್ನು ಥಳಿಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣವೇಣಿ ಟ್ಯಾಲೆಂಟ್ ಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಲ್ಕು ವರ್ಷದ ಬಾಲಕನನ್ನು ಶಾಲೆಯ ಶಿಕ್ಷಕರು ಅಮಾನುಷ ರೀತಿಯಲ್ಲಿ ಥಳಿಸಿದ್ದು, ಘಟನೆಗೆ ನ್ಯಾಯ ದೊರಕಿಸಿಕೊಡುವಂತೆ ಪಾಲಕರು ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಶಾಲೆಯ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರನ್ನೂ ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿದೆ. ಇದನ್ನು ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಮೀರ್ ಪೇಟೆಯ ಠಾಣೆಯ ಮುಖ್ಯಾಧಿಕಾರಿ ಎ. ಮನಮೋಹನ್ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ಅಪರಾಧ ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆ ಸೆಕ್ಷನ್ 75 ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ . ವಿಚಾರಣೆ ನಡೆಯುತ್ತಿರುವುದಾಗಿ ಅವರು ಹೇಳಿದ್ದಾರೆ.
ಫೀಜ್ ಕೊಡಲಿಲ್ಲ ಎಂಬ ಕಾರಣಕ್ಕೆ ನಾಲ್ಕು ವರ್ಷದ ಬಾಲಕ ಸ್ವರೂಪ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿರುವ ಸಂಬಂಧ ಆತನ ಪೋಷಕರು ಸೋಮರಾತ್ರಿ ರಾತ್ರಿ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.