ನವದೆಹಲಿ: ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಕೆಲವು ನಿಯಮಗಳನ್ನು ಬದಲಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪರಿಣಾಮ ದೇಶದಲ್ಲಿ 'ದೊಡ್ಡ ಹಾನಿ' ಆಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಕೋರ್ಟ್ ತೀರ್ಪಿನಿಂದಾಗಿ ದೇಶದಲ್ಲಿ ಗಲಭೆ, ಕೋಪ, ಅಸಮಾಧಾನ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಜನರಲ್ಲಿ ಗೊಂದಲ ಉಂಟಾಗಿದ್ದು, ಕೋರ್ಟ್ ತನ್ನ ಆದೇಶವನ್ನು ಮರು ಪರಿಶೀಲಿಸುವ ಮೂಲಕ ಗೊಂದಲ ಪರಿಹರಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.
ಈ ಸಂಬಂಧ ಇಂದು ಕೋರ್ಟ್ ಗೆ ಲಿಖಿತ ಮನವಿ ಸಲ್ಲಿಸಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, 1989ರ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದ( ದೌರ್ಜನ್ಯ ತಡೆ) ಕಾಯ್ದೆಯ ಅಂತರ ಕಡಿಮೆ ಮಾಡಿಲ್ಲ, ಇದನ್ನು ನ್ಯಾಯಾಂಗ ಶಾಸನಕ್ಕೆ ತಿದ್ದುಪಡಿ ತರುವ ಮೂಲಕ ಬದಲಾವಣೆ ಮಾಡಬೇಕು ಎಂದಿದ್ದಾರೆ.
ಕಳೆದ ಮಾರ್ಚ್ 20ರಂದು ಸರ್ವೋಚ್ಚ ನ್ಯಾಯಾಲಯ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ಭಯದಿಂದ ನಿರ್ವಹಿಸಲು ಮತ್ತು ಬ್ಲಾಕ್ ಮೇಲ್‌ಗೆ ಗುರಿಯಾಗುವುದನ್ನು ತಪ್ಪಿಸಲು ಎಸ್‌ಸಿ/ಎಸ್‌ಟಿ ಕಾಯಿದೆಯ ಕಾಠಿನ್ಯವನ್ನು ಕಡಿಮೆ ಮಾಡುವ ಆದೇಶವನ್ನು ಪ್ರಕಟಿಸಿತ್ತು. ಇದರಿಂದಾಗಿ ಎಸ್‌ಸಿ/ಎಸ್‌ಟಿ ಕಾಯಿದೆ ದುರ್ಬಲವಾಯಿತೆಂದು ಭಾವಿಸಿದ ದಲಿತರು ಭಾರತ್ ಬಂದ್ ಕರೆ ನೀಡಿದ್ದರು.
ಏಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ಹಿಂಸಾತ್ಮಕ ಪ್ರತಿಭಟನೆಯಲ್ಲಿ ದೇಶಾದ್ಯಂತ 10 ಮಂದಿ ಮೃತಪಟ್ಟಿದ್ದರು ಮತ್ತು ಪೊಲೀಸರು ಸೇರಿದಂತೆ 65 ಮಂದಿ ಗಾಯಗೊಂಡಿದ್ದರು.