ಉನ್ನಾವ್ ಅತ್ಯಾಚಾರ ಪ್ರಕರಣ: ಸಾಕ್ಷಿ ಹೇಳದಂತೆ ಗ್ರಾಮಸ್ಥರಿಗೆ ಆರೋಪಿ ಎಂಎಲ್ ಎ ಪರ ಗೂಂಡಾಗಳ ಬೆದರಿಕೆ

ಉನ್ನಾವ್ ಅತ್ಯಾಚಾರ ಪ್ರಕರಣ ಸಂಬಂಧ ಯಾವುದೇ ಕಾರಣಕ್ಕೂ ಸಾಕ್ಷಿ ಹೇಳದಂತೆ ಆರೋಪಿ ಬಿಜೆಪಿ ಶಾಸಕನ ಪರ ಗೂಂಡಾಗಳು ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ಥೆಯ ಸಂಬಂಧಿಯೊಬ್ಬರು ಹೇಳಿದ್ದಾರೆ.
ಆರೋಪಿ ಶಾಸಕ ಕುಲದೀಪ್ ಸೆಂಗಾರ್ (ಸಂಗ್ರಹ ಚಿತ್ರ)
ಆರೋಪಿ ಶಾಸಕ ಕುಲದೀಪ್ ಸೆಂಗಾರ್ (ಸಂಗ್ರಹ ಚಿತ್ರ)
ಲಖನೌ: ಉನ್ನಾವ್ ಅತ್ಯಾಚಾರ ಪ್ರಕರಣ ಸಂಬಂಧ ಯಾವುದೇ ಕಾರಣಕ್ಕೂ ಸಾಕ್ಷಿ ಹೇಳದಂತೆ ಆರೋಪಿ ಬಿಜೆಪಿ ಶಾಸಕನ ಪರ ಗೂಂಡಾಗಳು ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ಥೆಯ ಸಂಬಂಧಿಯೊಬ್ಬರು ಹೇಳಿದ್ದಾರೆ.
ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗಾರ್‌ನ ಗೂಂಡಾಗಳು ಗ್ರಾಮಸ್ಥರು ಬಾಯಿ ಮುಚ್ಚಿಕೊಂಡಿರುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆಯ ಚಿಕ್ಕಪ್ಪ ಆರೋಪಿಸಿದ್ದು, ಸೆಂಗಾರ್‌ನ ಗೂಂಡಾಗಳು ಗ್ರಾಮದ ಜನರಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಕೊಂಡಿರುವಂತೆ ತಾಕೀತು ಮಾಡಿದ್ದಾರೆ ಎಂದು ಹೇಳಿದ್ದಾರೆ.
'ಆರೋಪಿ ಬಿಜೆಪಿ ಶಾಸಕ ಸೆಂಗಾರ್ ಮತ್ತು ಅವರ ಬೆಂಬಲಿಗರಿಂದ ತಮ್ಮ ಕುಟುಂಬಕ್ಕೆ ಪ್ರಾಣಾಪಾಯವಿದ್ದು, ಎರಡು ಕಾರುಗಳಲ್ಲಿ ಗ್ರಾಮಕ್ಕೆ ತೆರಳಿದ್ದ ಗೂಂಡಾಗಳು ನನ್ನ ಜೊತೆ ಸಂಪರ್ಕವನ್ನು ಕಡಿಯುವಂತೆ ಅಥವಾ ಪರಿಣಾಮವನ್ನು ಎದುರಿಸುವಂತೆ ಬೆದರಿಸಿದ್ದಾರೆ. ಗ್ರಾಮಸ್ಥರನ್ನು ಗ್ರಾಮದಿಂದ ಹೊರಗೆ ಹಾಕುವುದಾಗಿ ಅವರು ಹೆದರಿಸುತ್ತಿದ್ದಾರೆ. ನನ್ನ ಜೊತೆ ಸಂಪರ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳು ಈಗಾಗಲೇ ನಾಪತ್ತೆಯಾಗಿದ್ದಾರೆ" ಎಂದು ಸಂತ್ರಸ್ತೆಯ ಚಿಕ್ಕಪ್ಪ ಭಯದ ನಡುವೆ ಮುಖಕ್ಕೆ ಮುಸುಕು ಹಾಕಿಕೊಂಡು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಶುಕ್ರವಾರ ಸಿಬಿಐ ಅದಿಕಾರಿಗಳು ಆರೋಪಿ ಶಾಸಕ ಸೆಂಗಾರ್‌ ನನ್ನು ಬಂಧಿಸಿದ್ದು, ನ್ಯಾಯಾಲಯವು ಶಾಸಕನಿಗೆ ಏಳು ದಿನಗಳ ಸಿಬಿಐ ಕಸ್ಟಡಿ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಉನ್ನಾವೊದ ಜಿಲ್ಲಾಸ್ಪತ್ರೆಯ ವೈದ್ಯಕೀಯ ವರಿಷ್ಠಾಧಿಕಾರಿ ಮತ್ತು ಇನ್ನೊರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿ ಶಾಸಕ ತನ್ನ ಅತ್ಯಾಚಾರ ನಡೆಸಿರುವುದಾಗಿ ಯುವತಿ ಆರೋಪಿಸಿದ್ದಳು. ಇದಾದ ನಂತರ ಆಕೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿರುವಾಗ ಸಾವನ್ನಪ್ಪಿದ್ದರು. ಆರೋಪಿ ಶಾಸಕನ ಸಹೋದರ ಅತುಲ್ ಸಿಂಗ್ ಸೆಂಗಾರ್, ಶಾಸಕನ ಜೊತೆ ಸೇರಿ ತನ್ನನ್ನು ಅತ್ಯಾಚಾರ ಮಾಡಿದ್ದು ಮಾತ್ರವಲ್ಲದೆ ತನ್ನ ತಂದೆಯನ್ನು ಥಳಿಸಿ ಹತ್ಯೆ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಳು.  ಪೊಲೀಸರು ಗುರುವಾರ ಅತುಲ್ ಸಿಂಗ್ ಜೊತೆಗೆ ಇತರ ಐವರನ್ನು ಬಂಧಿಸಿದ್ದರು.
ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 363 (ಅಪಹರಣ), 366 (ಮಹಿಳೆಯ ಅಪಹರಣ), 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯಿದೆ ಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಂತೆಯೇ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com