ನವದೆಹಲಿ: ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್(ಐಆರ್ ಸಿಟಿಸಿ) ಹೊಟೇಲ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಇತರರ ವಿರುದ್ಧ ಸಿಬಿಐ ಸೋಮವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ಸಿಬಿಐ ಇಂದು ಕೋರ್ಟ್ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ, ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಪುತ್ರ ತೇಜಶ್ವಿ ಯಾದವ್ ಅವರನ್ನು ಹೆಸರನ್ನು ಉಲ್ಲೇಖಿಸಿದೆ.
ಹಗರಣ ಸಂಬಂಧ ಇತ್ತೀಚಿಗಷ್ಟೇ ಸಿಬಿಐ ಅಧಿಕಾರಿಗಳು ರಾಬ್ರಿ ದೇವಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
2006ರಲ್ಲಿ ಲಾಲು ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಹೊಟೇಲ್ ಗಳಿಗೆ ನೀಡಿದ ಗುತ್ತಿಗೆಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿದ್ದಾರೆ.
ಈ ಸಂಬಂಧ ಕಳೆದ ಜೂನ್ ನಲ್ಲಿ ಸಿಬಿಐ, ದೆಹಲಿ, ಪಾಟ್ನಾದಲ್ಲಿರುವ ಲಾಲು ನಿವಾಸ ಹಾಗೂ ಗುರುಗಾಂವ್ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆಸಿತ್ತು. ಅಲ್ಲದೆ ಸಿಬಿಐ ಕೋರ್ಟ್ ಮುಂದೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿತ್ತು.
ಪುರಿ ಮತ್ತು ರಾಂಚಿಯಲ್ಲಿ ರೈಲ್ವೆಗಾಗಿ ಎರಡು ಹೋಟೆಲ್ ಗಳನ್ನು ನಡೆಸಲು ಹರ್ಷ್ ಕೊಚ್ಚರ್ ಎಂಬುವರಿಗೆ 15 ವರ್ಷಗಳ ಗುತ್ತಿಗೆ ನೀಡಿದ್ದು ಅದಕ್ಕೆ ಪ್ರತಿಯಾಗಿ ಲಾಲು ಪ್ರಸಾದ್ ಯಾದವ್ ಕುಟುಂಬ ಪಾಟ್ನಾದಲ್ಲಿ ಎರಡು ಎಕರೆ ಜಮೀನನ್ನು ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.