ನವದೆಹಲಿ: ಜಮ್ಮುವಿನ ಕತುವಾ ಜಿಲ್ಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂಬ ಸಾಮಾಜಿಕ ಜಾಲತಾಣಗಳ ವರದಿಗಳನ್ನು ಶನಿವಾರ ಪೊಲೀಸರು ತಳ್ಳಿಹಾಕಿದ್ದಾರೆ.
ಕತುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶದಾದ್ಯಂತ ಚರ್ಚೆ ಹಾಗೂ ಆಕ್ರೋಶಗಳು ವ್ಯಕ್ತವಾಗುತ್ತಿರುವ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ವರದಿಗಳು ಹರಿದಾಡಲು ಆರಂಭಿಸಿತ್ತು. ಕತುವಾ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಹೇಳಲಾಗುತ್ತಿತ್ತು.
ವರದಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಈ ವರದಿಗಳು ಸತ್ಯಕ್ಕೆ ದೂರವಾದದ್ದು, ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಜಮ್ಮು ಮತ್ತು ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಹೇಳಿದ್ದಾರೆ.
ಅರಣ್ಯ ಪ್ರದೇಶಕ್ಕೆ ಕುದುರೆಗಳನ್ನು ಕರೆದುಕೊಂಡು ಹೋಗಿದ್ದ 8 ವರ್ಷದ ಬಾಲಕಿ ಆಸೀಫಾ ಜ.10 ರಂದು ನಾಪತ್ತೆಯಾಗಿದ್ದಳು. ಬಾಲಕಿಯನ್ನು ಅಪಹರಿಸಿದ್ದ ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿದ್ದರು.