ಅಪ್ರಾಪ್ತ ಹೆಣ್ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು; ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಇತ್ತೀಚಿನ ಕಾಶ್ಮೀರದ ಕತುವಾ, ಉತ್ತರಪ್ರದೇಶದ ಉನ್ನಾವೋ ಹಾಗೂ ಸೂರತ್ ಅತ್ಯಾಚಾರ ಪ್ರಕರಣಗಳು ದೇಶದಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿರುವ ಬೆನ್ನಲ್ಲೇ, 12 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ...
ರಾಷ್ಟ್ರಪತಿ ರಾಮನಾಥ್ ಕೋವಿಂದ್
ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ: ಇತ್ತೀಚಿನ ಕಾಶ್ಮೀರದ ಕತುವಾ, ಉತ್ತರಪ್ರದೇಶದ ಉನ್ನಾವೋ ಹಾಗೂ ಸೂರತ್ ಅತ್ಯಾಚಾರ ಪ್ರಕರಣಗಳು ದೇಶದಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿರುವ ಬೆನ್ನಲ್ಲೇ, 12 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕೇಂದ್ರ ಸರ್ಕಾರ ನಿರ್ಧಾರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಒಪ್ಪಿಗೆ ಸೂಚಿಸಿದ್ದಾರೆ. 
ನಿನ್ನಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯೊಂದನ್ನು ನಡೆಸಿತ್ತು. ಸಭೆಯಲ್ಲಿ ಅತ್ಯಾಚಾರಿಗಳ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.  ಕೇಂದ್ರ ಸರ್ಕಾರ ಕೈಗೊಂಡಿದ್ದ ಈ ಅಧ್ಯಾದೇಶವನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದರು. ಇದೀಗ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಷ್ಟ್ರಪತಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ. 
12 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಕೇಂದ್ರ ಸರ್ಕಾರ ನಿನ್ನೆಯಷ್ಟೇ ನಿರ್ಧಾರ ಕೈಗೊಂಡಿತ್ತು. ಅಲ್ಲದೆ, ಇತರೆ ಅತ್ಯಾಚಾರ ಪ್ರಕರಣಗಳ ದೋಷಿಗಳಿಗೂ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಶೀಘ್ರವೇ ಕಾನೂನು ಜಾರಿ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸುವುದಾಗಿ ತಿಳಿಸಿತ್ತು. 
ಅತ್ಯಾಚಾರಿಗಳ ಶಿಕ್ಷೆಯ ಪ್ರಮಾಣ ಹೆಚ್ಚಿಸುವುದರ ಜೊತೆಜೊತೆಗೇ ತನಿಖೆ ಮತ್ತು ವಿಚಾರಣೆಗೆ ಕಾಲಮಿತಿ, ಇದಕ್ಕೆ ಅನ್ಯವಾಗುವಂತೆ ತ್ವರಿತ ನ್ಯಾಯಾಲಯಗಳ ಸ್ಥಾಪನೆ, ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಆಸ್ಪತ್ರೆಗಳಿಗೆ ಫಾರೆನ್ಸಿಕ್ ಕಿಟ್ ವಿತರಿಸಲು ಸರ್ಕಾರ ನಿರ್ಧರಿಸುವ ಮೂಲಕ ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳನ್ನು ಬಲಪಡಿಸಲು ನಿರ್ಧಾರ ಕೈಗೊಂಡಿತ್ತು. ಐಸಿಸಿ, ಸಾಕ್ಷಿ ಕಾಯ್ದೆ, ಸಿಆರ್'ಪಿಸಿ ಮತ್ತು ಪೋಕ್ಸೋ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಹೊಸ ಕಾನೂನು ರೂಪಿಸಿತ್ತು. ಇದನ್ನು ಸುಗ್ರೀವಾಜ್ಞೆ ಮೂಲಕ ಹೊರಡಿಸಿ, ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿತ್ತು. 
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಇದೀಗ ರಾಷ್ಟ್ರಪತಿ ಕೋವಿಂದ್ ಅವರು ಅಂಕಿತ ಹಾಕಿದ್ದು, ಇಂದಿನಿಂದ ತಿದ್ದುಪಡಿಯಾಗಿರುವ ಕಾಯ್ದೆಗಳು ಕಾನೂನು ಸ್ವರೂಪ ಪಡೆದುಕೊಂಡಿದೆ. ಇದರಂತೆ ಹೊಸ ಕಾಯ್ದೆಗಳು ಇಂದಿನಿಂದ ಕಾರ್ಯರೂಪಕ್ಕೆ ಬಂದಿವೆ. 
ಈ ಹಿಂದೆ 2012ರಲ್ಲಿ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದ್ದ ನಿರ್ಭಯಾ ಪ್ರಕರಣದ ಬಳಿಕವೂ ಇಂತಹದ್ದೇ ಕಠಿಣ ಕಾಯ್ದೆ ಜಾರಿಗೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಆಗ ಅತ್ಯಾಚಾರ ಪ್ರಕರಣದಲ್ಲಿ ಮಹಿಳೆ ಸಾವಿಗೀಡಾದರೆ ಅಥವಾ ಅತ್ಯಾಚಾರದ ಬಳಿಕ ಕೋಮಾವಸ್ಥೆಗೆ ತೆರಳಿದರೆ ಅಂತಹ ಸಂದರ್ಭದಲ್ಲಿ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ರೂಪುಗೊಂಡಿತ್ತು. ನಂತರ ಇದೇ ಅಂಶ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com