ಕಾಸ್ಟಿಂಗ್ ಕೌಚ್ ವಿವಾದ ಆಂಧ್ರ ಪ್ರದೇಶದಲ್ಲಿ ತಲ್ಲಣ ಸೃಷ್ಟಿ ಮಾಡಿದ್ದು, ಈ ಸಂಬಂಧ ಹೋರಾಟ ನಡೆಸುತ್ತಿರು ನಟಿ ಶ್ರೀರೆಡ್ಡಿ ನೀಡಿದ್ದ ಹೇಳಿಕೆ ಇದೀಗ ತೆಲುಗು ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಈ ಹಿಂದೆ ನಟ ಪವನ್ ಕಲ್ಯಾಣ್ ಅವರು, ಕಾಸ್ಟಿಂಗ್ ಕೌಚ್ ಕುರಿತ ತಮ್ಮ ಪ್ರತಿಭಟನೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದ ನಟಿ ಶ್ರೀರೆಡ್ಡಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯಾರಾದರೂ ಪಲ್ಲಂಗಕ್ಕೆ ಕರೆದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಂದು ಹೇಳಿದ್ದ ಪವನ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನಟಿ ಶ್ರೀರೆಡ್ಡಿ, 'ಪೊಲೀಸ್ ದೂರು ನೀಡುವುದು ನಮಗೇನು ಗೊತ್ತಿಲ್ಲವೇ.. ನೀವು ಚಿತ್ರರಂಗದ ಪವರ್ ಫುಲ್ ನಾಯಕರು. ನಿಮ್ಮಿಂದ ನಮ್ಮ ಸಮಸ್ಯೆ ನೀಗುತ್ತದೆ ಎಂದು ಕೊಂಡರೆ ಉಡಾಫೆ ಉತ್ತರ ನೀಡುತ್ತೀರಾ.. ಇಷ್ಟು ದಿನ ನಿಮ್ಮನ್ನು ಅಣ್ಣಾ ಎಂದು ಕರೆಯುತ್ತಿದ್ದೆವು.. ಆ ಗೌರವ ನೀವು ಉಳಿಸಿಕೊಂಡಿಲ್ಲ ಎಂದು ಹೇಳಿ ಪವನ್ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಲ್ಲದೇ ಪವನ್ ಕಲ್ಯಾಣ್ ತಾಯಿಯನ್ನೂ ಕೂಡ ಅಶ್ಲೀಲವಾಗಿ ನಿಂದಿಸಿದ್ದರು.