ಅಣ್ಣಾದೊರೈ ಸ್ಮಾರಕ ಪಕ್ಕದಲ್ಲಿಯೇ ಕರುಣಾನಿಧಿ ಸಮಾಧಿ: ಎಲ್ಲಾ ಅರ್ಜಿಗಳು ತಿರಸ್ಕೃತ

ತಮಿಳುನಾಡಿನಲ್ಲಿ ರಾಜಕೀಯ ಸಮರ ಹಾಗೂ ಹೈಡ್ರಾಮಕ್ಕೆ ಕಾರಣವಾಗಿದ್ದ ಡಿಎಂಕೆ ಸರ್ವೋಚ್ಚ ನಾಯಕ ಎಂ.ಕರುಣಾನಿಧಿಯವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕೆಂಬ ವಿಚಾರಕ್ಕೆ ಮದ್ರಾಸ್ ಹೈಕೋರ್ಟ್ ಅಂತ್ಯ ಹಾಡಿದ್ದು, ಈ ಕುರಿತು ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಬುಧವಾರ ತಿರಸ್ಕರಿಸಿದೆ...
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್
ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಸಮರ ಹಾಗೂ ಹೈಡ್ರಾಮಕ್ಕೆ ಕಾರಣವಾಗಿದ್ದ ಡಿಎಂಕೆ ಸರ್ವೋಚ್ಚ ನಾಯಕ ಎಂ.ಕರುಣಾನಿಧಿಯವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕೆಂಬ ವಿಚಾರಕ್ಕೆ ಮದ್ರಾಸ್ ಹೈಕೋರ್ಟ್ ಅಂತ್ಯ ಹಾಡಿದ್ದು, ಈ ಕುರಿತು ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಬುಧವಾರ ತಿರಸ್ಕರಿಸಿದೆ. 
ಅಣ್ಣಾದೊರೈ, ಎಂಜಿಆರ್ ಹಾಗೂ ಜಯಲಲಿತಾ ಸಮಾಧಿಗಳು ಇರುವ ರಾಜಧಾನಿ ಚೆನ್ನೈನ ಮರೀನಾ ಬೀಚ್ ನಲ್ಲಿ ಅಣ್ಣಾದೊರೈ ಸ್ಮಾರಕದ ಪಕ್ಕದಲ್ಲಿಯೇ ಕರುಣಾನಿಧಿಯವರನ್ನು ಮಣ್ಣು ಮಾಡಬೇಕೆಂದು ಡಿಎಂಕೆ ಪಟ್ಟು ಹಿಡಿದಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಹಾಗೂ ಕಾನೂನು ತೊಡಕು ಮುಂದೊಡ್ಡಿ ಮುಖ್ಯಮಂತ್ರಿ ಇ. ಪಳನಿಸ್ವಾಮಿಯವರು ಇದನ್ನು ನಿರಾಕರಿಸಿದ್ದರು. 
ಇದರ ಬೆನ್ನಲ್ಲೇ ಡಿಎಂಕೆ ಕಾರ್ಯಕರ್ತರು ಹಿಂಸಾಚಾರ ನಡೆಸಿದರೆ ಎಂಬ ಕಾರಣಕ್ಕೆ ಕಾನೂನು ವಿಭಾಗ ರಾತ್ರೋರಾತ್ರಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್'ನ ಹಂಗಾಮಿ ನ್ಯಾಯಮೂರ್ತಿ, ಕನ್ನಡಿಗ ಹುಲುವಾಡಿ ಜಿ.ರಮೇಶ್ ಅವರು ಈ ಅರ್ಜಿಯನ್ನು ರಾತ್ರಿಯೇ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದ್ದರು. 
ಇದರಂತೆ ಇಂದು ಬೆಳಿಗ್ಗೆ 8 ಗಂಟೆಗೆ ವಿಚಾರಣೆ ಆರಂಭವಾಗಿದ್ದು, ವಿಚಾರಣೆ ವೇಳೆ ಮರೀನಾ ಬೀಚ್ ನಲ್ಲಿ ಸಮಾಧಿ ನಿರ್ಮಾಣ ಬೇಡವೆಂದು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ 5 ಅರ್ಜಿಗಳನ್ನು ವಾಪಸ್ ತೆಗೆದುಕೊಳ್ಳಲಾಗಿದೆ. 
ವಿಚಾರಣೆ ವೇಳೆ ಅರ್ಜಿ ಸಲ್ಲಿಸಿದ್ದ ಟ್ರಾಫಿಕ್ ರಾಮಸ್ವಾಮಿಯವರು ಸಮಾಧಿ ನಿರ್ಮಾಣಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು ತಿಳಿಸಿದ್ದಾರೆ. ರಾಮಸ್ವಾಮಿಯವರ ಈ ಹೇಳಿಕೆ ಹಿನ್ನಲೆಯಲ್ಲಿ ಅರ್ಜಿಯನ್ನು ವಾಪಸ್ ಪಡೆಯುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಇದರಂತೆ. ಟ್ರಾಫಿಕ್ ರಾಮಸ್ವಾಮಿ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. 
ಈ ಬೆಳವಣಿಗೆ ಹಿನ್ನಲೆಯಲ್ಲಿ ಕರುಣಾನಿಧಿ ಸಮಾಧಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಎಲ್ಲಾ 5 ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಸ್ಮಾರಕದ ಬಳಿ ಕರುಣಾನಿಧಿ ಅಂತ್ಯಕ್ರಿಯೆಗೆ ಯಾವುದೇ ತೊಡಕುಗಳಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಹಂಗಾಮಿ ನ್ಯಾಯಮೂರ್ತಿ ಹುಲವಾಡಿ ರಮೇಶ್ ಅವರು ಈ ಕುರಿತು ತೀರ್ಪು ಬರೆಸುತ್ತಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com