'ಕೇರಳದಲ್ಲಿ ಮುಂಗಾರು ಅಬ್ಬರ'ಕ್ಕೆ 20 ಬಲಿ, ಕೇಂದ್ರದ ನೆರವು ಕೋರಿದ ಸಿಎಂ ಪಿಣರಾಯಿ ವಿಜಯನ್

ದೇವರನಾಡು ಕೇರಳದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ ಸುಮಾರು 20 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಿರುವನಂತಪುರಂ: ದೇವರನಾಡು ಕೇರಳದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ ಸುಮಾರು 20 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಇಡುಕ್ಕಿ ಜಿಲ್ಲೆಯೊಂದರಲ್ಲೇ ಅತೀ ಹೆಚ್ಚು ಅಂದರೆ ಕಳೆದೆರಡು ದಿನಗಳಲ್ಲಿ 128.6 ಮಿಮಿ ಮತ್ತು 124 ಮಿಮೀ ಮಳೆಯಾಗಿದ್ದು, ತೋಡುಪುಳಾ ಮತ್ತು ಮುನ್ನಾರ್ ನಲ್ಲಿ 107.3 ಮತ್ತು 54.2 ಮಿ.ಮೀ ಮಳೆಯಾಗಿದೆ. ಪರಿಣಾಮ ಕೇರಳದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೇರಳದಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇನ್ನು ಈ ವರೆಗೂ ಕೇರಳದಲ್ಲಿ ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ 20 ಮಂದಿ ಸಾವಿಗೀಡಾಗಿದ್ದಾರೆ. 
ಈ ಪೈಕಿ ಮಲಪ್ಪುರಂವೊಂದರಲ್ಲೇ 5 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಚೆಲಿಯಾರ್ ನದಿಯಲ್ಲಿ ಈ ದೇಹಗಳು ಪತ್ತೆಯಾಗಿದೆ.  
ಅಧಿಕಾರಿಗಳ ತುರ್ತು ಸಭೆ ಕರೆದ ಸಿಎಂ ಪಿಣರಾಯಿ ವಿಜಯನ್
ಇನ್ನು ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ ಇಂದು ಸಿಎಂ ಪಿಣರಾಯಿ ವಿಜಯನ್ ಅಧಿಕಾರಿಗಳ ತುರ್ತು ಸಭೆ ಕರೆದು ಮಾಹಿತಿ ಸಂಗ್ರಹಿಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಕೇರಳದಲ್ಲಿ ಪರಿಸ್ಥಿತಿ ಕೊಂಚ ವ್ಯತಿರಿಕ್ತವಾಗಿದೆ. ಆದರೂ ಸರ್ಕಾರ ಸೂಕ್ತ ಕ್ರಮಗಳನ್ನು ಕೊಗೊಳ್ಳಲಿದೆ. ಸಂಭಾವ್ಯ ಪ್ರವಾಹ ಪರಿಸ್ಛಿತಿ ನಿಭಾಯಿಸಲು ಸರ್ಕಾರ ಸಿದ್ಧವಾಗಿದ್ದು, ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಕೇಂದ್ರೀಯ ಪ್ರಕೃತಿ ವಿಕೋಪ ಸಿಬ್ಬಂದಿಗಳನ್ನು ಮತ್ತು ಅಗತ್ಯ ಪರಿಕರಗಳನ್ನು ರವಾನಿಸುವಂತೆ ಕೇಳಿಕೊಳ್ಳಲಾಗಿದೆ. ಈಗಾಗಲೇ 3 ಎನ್ ಡಿಆರ್ ಎಫ್ ತಂಡ ಕೇರಳಕ್ಕೆ ಆಗಮಿಸಿದ್ದು, ಇದಲ್ಲದೆ ಇತರೆ ಎರಡು ತಂಡ ಶೀಘ್ರ ಕೇರಳಕ್ಕೆ ಆಗಮಿಸಲಿದೆ. ರಾಜ್ಯದ 6 ತಂಡಗಳು ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಹೇಳಿದರು.
ನದಿ ಪಾತ್ರದಲ್ಲಿ, ಡ್ಯಾಂ ಹಿನ್ನೀರಿನಲ್ಲಿ ನಿಲ್ಲದಂತೆ ಪ್ರವಾಸಿಗರಿಗೆ ಎಚ್ಚರಿಕೆ
ಇನ್ನು ರಾಜ್ಯದ ಬಹುತೇಕ ಡ್ಯಾಂ ಗಳು ಭರ್ತಿಯಾಗಿದ್ದು, ಇಂದಿನಿಂದ ಡ್ಯಾಂನಿಂದ ನೀರು ಹೊರ ಬಿಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರ ಪ್ರಾಥಮಿಕ ಹಂತವಾಗಿ ಇಂದು ಮಧ್ಯಾಹ್ನ ಇಡುಕ್ಕಿ ಡ್ಯಾಂ ನಿಂದ ಸುಮಾರು 50 ಸಾವಿರ ಲೀಟರ್ ನೀರನ್ನು ಹೊರ ಬಿಡಲಾಗಿದೆ. ಇದೇ ಕಾರಣಕ್ಕೆ ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ನದಿಯಲ್ಲಿರದಂತೆ, ಸಾಧ್ಯವಾದರೆ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com