ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಮೋದಿ ಕೊಡುಗೆ: 'ಆಯುಷ್ಮಾನ್ ಭಾರತ್' ಘೋಷಣೆ ಸಾಧ್ಯತೆ

ಆಗಸ್ಟ್ 15 ರಾಜಧಾನಿ ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಈ ಅವಧಿಯ ಕೊನೆಯ ಭಾಷಣ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಆಗಸ್ಟ್ 15 ರಾಜಧಾನಿ ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಈ ಅವಧಿಯ ಕೊನೆಯ ಭಾಷಣ ಮಾಡಲಿದ್ದು, ಈ ವೇಳೆ ದೇಶದ ಜನತೆಗೆ ಆರೋಗ್ಯ ಕೊಡುಗೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಒದಗಿಸುವ ವಿಶ್ವದ ಅತಿದೊಡ್ಡ ಯೋಜನೆಯೆಂದೇ ಹೇಳಲಾಗುತ್ತಿರುವ 'ಆಯುಷ್ಮಾನ್ ಭಾರತ್' ಯೋಜನೆಯನ್ನು ಪ್ರಧಾನಿ ಮೋದಿಯವರು ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಈ ಯೋಜನೆಯಡಿಯಲ್ಲಿ ಕುಟುಂಬವೊಂದಕ್ಕೆ ರೂ.5 ಲಕ್ಷ ಮೌಲ್ಯದ ಆರೋಗ್ಯ ವಿಮೆ ಒದಗಿಸಲಾಗುತ್ತದೆ. ಮೊದಲ ಹಂತವಾಗಿ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. 
ಮೊದಲ ಹಂತದಲ್ಲಿ ಛತ್ತೀಸ್ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ದಮನ್ ಮತ್ತು ದಿಯು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜಾರಿ ತರಲಾಗುತ್ತದೆ. 
ಯೋಜನೆಯಲ್ಲಿ 100 ಆಸ್ಪತ್ರೆಗಳಿದ್ದು, ಇದರಲ್ಲಿ ಬಹುತೇಕ ಆಸ್ಪತ್ರೆಗಳು ಸರ್ಕಾರಿ ವಲಯದ್ದಾಗಿರುತ್ತವೆ. ಮೊದಲಿಗೆ ಶಸ್ತ್ರಚಿಕಿತ್ಸೆಗಳು ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆಗಳನ್ನು ಆರಂಭಿಸಲಾಗುತ್ತದೆ. ಪಟ್ಟಿಯಲ್ಲಿ 1000 ವೈದ್ಯಕೀಯ ಸ್ಥಿತಿಗಳಿಗೆ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಆದರೆ, ಎಲ್ಲಾ ಆಸ್ಪತ್ರೆಗಳಲ್ಲೂ ಈ ಚಿಕಿತ್ಸೆಗಳನ್ನು ನೀಡಲಾಗುವುದಿಲ್ಲ. ಆಯಾ ರೋಗಗಳಿಗೆ, ಆಯಾ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂಬುದರ ಮಾಹಿತಿಗಳನ್ನು ಪಟ್ಟಿಯಲ್ಲಿ ನೀಡಲಾಗಿರುತ್ತದೆ. 
ಯೋಜನೆ ಆಗಸ್ಟ್ 15 ರಿಂದ ಜಾರಿಯಾಗಲಿದ್ದು, ಮೊದಲ ಹಂತದಲ್ಲಿ ಕೇವಲ ಜಿಲ್ಲೆಗಳಲ್ಲಿ ಮಾತ್ರ ಆರಂಭಿಸಲಾಗುತ್ತದೆ ಎಂದು ಯೋಜನೆಯ ಸಿಇಒ ಇಂದು ಭೂಷಣ್ ಅವರು ಹೇಳಿದ್ದಾರೆ. 
ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ. 11 ರಾಜ್ಯಗಳ 70-80 ಜಿಲ್ಲೆಗಳಲ್ಲಿ ಯೋಜನೆಯ ಸೇವೆಗಳು ಲಭ್ಯವಾಗಲಿವೆ. ಸಾಮಾಜಿಕ ಆರ್ಥಿಕ ಸಮೀಕ್ಷೆಗಳ ಬಳಿಕ ಜನರ ಹೆಸರುಗಳನ್ನು ಅಂತಿಮಗೊಳಿಸಿ, ಅರ್ಹ ಜನರಿಗೆ ಯೋಜನೆಯ ಫಲ ಸಿಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 
ಕೆಲ ರಾಜಕೀಯ ಕಾರಣಗಳಿಂದ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಕರ್ನಾಟಕ, ಪಂಜಾಬ್, ದೆಹಲಿ, ತೆಲಂಗಾಣ ಹಾಗೂ ಒಡಿಶಾ ರಾಜ್ಯಗಳು ಯೋಜನೆಗೆ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com