ಕೇರಳ ಇತಿಹಾಸದಲ್ಲೇ ಇದೇ ಮೊದಲು, ಎಲ್ಲ 35 ಜಲಾಶಯಗಳ ಗೇಟ್ ಓಪನ್

ಕೇರಳ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಆ ರಾಜ್ಯದ ಎಲ್ಲಾ ಡ್ಯಾಂಗಳೂ ಭರ್ತಿಯಾಗಿದ್ದು, ಅಪಾಯದ ಮಟ್ಟ ಮೀರಿದೆ. ಹೀಗಾಗಿ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಜಲಾಶಯಗಳಿಂದ ನೀರು ಹೊರಗಗೆ ಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಿರುವನಂತಪುರಂ: ಕೇರಳ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಆ ರಾಜ್ಯದ ಎಲ್ಲಾ ಡ್ಯಾಂಗಳೂ ಭರ್ತಿಯಾಗಿದ್ದು, ಅಪಾಯದ ಮಟ್ಟ ಮೀರಿದೆ. ಹೀಗಾಗಿ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಜಲಾಶಯಗಳಿಂದ ನೀರು ಹೊರಗಗೆ ಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೇರಳದ ಒಟ್ಟು 35 ಡ್ಯಾಂಗಳಿದ್ದು, ಇದೇ ಭಾರಿ ಮಳೆಯಿಂದಾಗಿ ಎಲ್ಲ ಡ್ಯಾಂಗಳೂ ಭರ್ತಿಯಾಗಿವೆ. ಈ ಹಿನ್ನಲೆಯಲ್ಲಿ ಎಲ್ಲ ಡ್ಯಾಂಗಳ ಗೇಟ್ ಗಳನ್ನು ತೆರೆದು ನೀರು ಹೊರಗೆ ಹರಿಸಲಾಗುತ್ತಿದೆ. ಇಡುಕ್ಕಿ, ಮುಲ್ಲಾ ಪೆರಿಯಾರ್, ಬಾಣಾಸುರ ಸಾಗರ ಡ್ಯಾಂ, ಮಟ್ಟುಪೆಟ್ಟಿ, ಥೆನ್ಮಾಲಾ ಡ್ಯಾಂ ಸೇರಿದಂತೆ ಎಲ್ಲ 35 ಡ್ಯಾಂಗಳೂ ಭರ್ತಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಎಲ್ಲ ಡ್ಯಾಂಗಳಿಂದಲೂ ಹೆಚ್ಚುವರಿ ಭಾರಿ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ.
ಭಾರಿ ಮಳೆಯಿಂದಾಗಿ ಮಲ್ಲಾಪೆರಿಯಾರ್ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿದ್ದು, ಮಧ್ಯಾಹ್ನದ ವೇಳೆಗೆ ಜಲಾಶಯ ಗರಿಷ್ಠ ಸಂಗ್ರಹ ಮಟ್ಟ 142 ಅಡಿಗೆ ತಲುಪಿತ್ತು. ಹೀಗಾಗಿ ನಿನ್ನೆ ಸಂಜೆ ಜಲಾಶಯದ ಎಲ್ಲ 13 ಗೇಟ್‌ಗಳನ್ನು ತೆರೆಯಲಾಯಿತು. ಇಡುಕ್ಕಿ ಜಲಾಶಯದಿಂದಲೂ ಎಲ್ಲ ಐದೂ ಗೇಟ್‌ಗಳಿಂದ ನೀರು ಹೊರ ಬಿಡಲಾಗುತ್ತಿದೆ. 
ಜಲಾಶಯಗಳ ಕೆಳಭಾಗದ ತಗ್ಗುಪ್ರದೇಶದ ಜನರು ಮುಳುಗಡೆ ಭೀತಿ ಎದುರಿಸುತ್ತಿದ್ದಾರೆ. ಕಾಸರಗೋಡಿನಿಂದ ತಿರುವನಂತಪುರದವರೆಗೆ ಎಲ್ಲಾ ನದಿಗಳಲ್ಲೂ ಪ್ರವಾಹ ಉಕ್ಕೇರಿದೆ. ಪರಿಣಾಮ ಸಾವಿರಾರು ಮಂದಿ ಸಂತ್ರಸ್ಥರಾಗಿದ್ದು, ಅಧಿಕಾರಿಗಳು ನೀಡಿರುವ ಮಾಹಿತಿ ಮೇರೆಗೆ ಈ ವರೆಗೂ ಸುಮಾರು 65 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಅಂತೆಯೇ ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು (ಎನ್‌ಡಿಆರ್‌ಎಫ್‌) ನೆರೆ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com