ಕೇರಳ ಪ್ರವಾಹ: ಒಂದೇ ದಿನ 26 ಸಾವು, 167ಕ್ಕೇರಿದ ಸಾವಿನ ಸಂಖ್ಯೆ

ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಬಲಿಯಾದವರ ಸಂಖ್ಯೆ 167ಕ್ಕೆ ಏರಿಕೆಯಾಗಿದ್ದು, ಗುರುವಾರ ಒಂದೇ ದಿನ 26 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ತಿರುವನಂತಪುರಂ: ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಬಲಿಯಾದವರ ಸಂಖ್ಯೆ 167ಕ್ಕೆ ಏರಿಕೆಯಾಗಿದ್ದು, ಗುರುವಾರ ಒಂದೇ ದಿನ 26 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನೆರೆಪೀಡಿತ ಪಟ್ಟಣಮ್ ತಿಟ್ಟಕ್ಕೆ ರಕ್ಷಣಾ ಕಾರ್ಯಾಚರಣೆಗೆ 10 ಬೋಟ್ ಗಳನ್ನು ರವಾನಿಸಲಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ ಡಿಆರ್ ಎಫ್ ನ 540 ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ತಿರುವನಂತಪುರ, ಎರ್ನಾಕುಲಂ, ಕೊಲ್ಲಮ್ ಮತ್ತು ಆಲಪ್ಪುಳ ಜಿಲ್ಲೆಗಳ  ಮೀನುಗಾರರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.  
ಹಲವು ಜಿಲ್ಲೆಗಳಲ್ಲಿ  ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿದು ಹೋಗಿದೆ. ಚಾಲಕ್ಕುಡಿ, ಪೆರಿಯಾರ್ ನದಿ ದಂಡೆಯಲ್ಲಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ  ಸ್ಥಳಗಳಿಗೆ ರವಾನಿಸಲಾಗುತ್ತದೆ.  ಇತ್ತ ಕೊಚ್ಚಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆ ನೀರು  ನಿಂತಿದ್ದು, ವಿಮಾನ ನಿಲ್ದಾಣವನ್ನು ಆ.26ರ ತನಕ ಮುಚ್ಚಲಾಗಿದೆ.  ಚೆಂಗನ್ನೂರು ಶ್ರೀ ಅಯ್ಯಪ್ಪ ಕಾಲೇಜು ಹಾಸ್ಟೆಲ್ ನಲ್ಲಿ 30 ಮಂದಿ ವಿದ್ಯಾರ್ಥಿನಿಯರು ಹೊರಬರಲಾರದೆ  ಸಿಲುಕಿಕೊಂಡಿರುವ ಘಟನೆ ವರದಿಯಾಗಿದೆ.
ಮಂಜಾಲಿ , ಆಲುವಾ ಪಟ್ಟಣದಲ್ಲಿ ನೆರೆಯಿಂದ ಸಂತ್ರಸ್ತರಾಗಿರುವವರಿಗೆ  1,500 ಆಹಾರ ಪ್ಯಾಕೆಟ್ ಗಳನ್ನು ಹೆಲಿಕಾಪ್ಟರ್ ಮೂಲಕ ಬೆಳಗ್ಗೆ ಪೂರೈಸಲಾಗಿದೆ. 7,500 ಪ್ಯಾಕೆಟ್ ಗಳನ್ನು ತಕ್ಷಣ ಪೂರೈಸಲಾಗುವುದು. ಸಂಜೆಯೊಳಗೆ 20,000 ಆಹಾರ ಪೊಟ್ಟಣಗಳು ತಲುಪಲಿದೆ ಎಂದು ಎರ್ನಾಕುಲಂ ಜಿಲ್ಲಾಡಳಿತ ತಿಳಿಸಿದೆ. ಚೆಂಗನ್ನೂರು ಮತ್ತು ಪಟ್ಟಣಂತಿಟ್ಟದಲ್ಲಿ ನೆರೆ ನೀರಿನಿಂದಾಗಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.  ಮಧುರೈ ಕಾರ್ಪೊರೇಶನ್  ಕೇರಳಕ್ಕೆ 20ಲಕ್ಷ ರೂ.ವೆಚ್ಚದ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ. ಸಿಬಿಎಸ್ ಸಿ ಮತ್ತು  ಐಸಿಎಸ್ ಸಿ ಶಾಲೆಗಳಿಗೆ ಆ.27ರಿಂದ 29ರ ತನಕ ರಾಜ್ಯ ಸರಕಾರದ ನಿರ್ದೇಶನದಂತೆ ಓಣಂ ರಜೆ ಘೋಷಿಸಲಾಗಿದೆ.
ಕೇರಳ ಸಿಎಂಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ಇನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಕೇರಳಕ್ಕೆ ಅಗತ್ಯವಾದ ಸಕಲ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಅಲ್ಲದೆ ತಾವೇ ಖುದ್ದು ಕೇರಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸುವುದಾಗಿ ಹೇಳಿದ್ದಾರೆ.
ಇತ್ತ ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್ ಅವರು, ರಾಜ್ಯದಲ್ಲಿ ಮಳೆ ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com