ಸೇವಾ ಪಾವತಿ ಹೆಚ್ಚಳಕ್ಕೆ ಸರ್ಕಾರ ನಕಾರ: ಸೇನೆಯಲ್ಲಿ ಭುಗಿಲೆದ್ದ ಅಸಮಾಧಾನ

ಸುಮಾರು ಒಂದು ಲಕ್ಷ ಸಶಸ್ತ್ರ ಸಿಬ್ಬಂದಿಗೆ ಅಧಿಕ ಸೇನಾ ಸೇವಾ ಪಾವತಿ (ಎಂಎಸ್‌ಪಿ) ಹೆಚ್ಚಳ ಮಾಡಬೇಕೆಂಬ ದೀರ್ಘ ಕಾಲದ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದ ಬೆನ್ನಲ್ಲೇ ಭಾರತೀಯ ಸೇನೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸುಮಾರು ಒಂದು ಲಕ್ಷ ಸಶಸ್ತ್ರ ಸಿಬ್ಬಂದಿಗೆ ಅಧಿಕ ಸೇನಾ ಸೇವಾ ಪಾವತಿ (ಎಂಎಸ್‌ಪಿ) ಹೆಚ್ಚಳ ಮಾಡಬೇಕೆಂಬ ದೀರ್ಘ ಕಾಲದ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದ ಬೆನ್ನಲ್ಲೇ ಭಾರತೀಯ ಸೇನೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಸರ್ಕಾರದ ನಿರ್ಧಾರ ಹೊರ ಬಿದ್ದ ಬೆನ್ನಲ್ಲೇ ದೆಹಲಿ ಭಾರತೀಯ ಸೇನೆಯ ಪ್ರಧಾನ ಕಚೇರಿಯಲ್ಲಿ ಚಟುವಟಿಕೆ ಗರಿಗೆದರಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಸೇನಾ ಕಚೇರಿ ಆಗ್ರಹಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ದಶಕಗಳ ಕಾಲ ಅಧಿಕ ಸೇನಾ ಸೇವಾ ಪಾವತಿ ಕುರಿತು ನಿರೀಕ್ಷೆ ಇಟ್ಟುಕೊಂಡಿರುವ ಸೈನಿಕರಿಗೆ ಅಸಮಾಧಾನ ಉಂಟು ಮಾಡಿದೆ ಎಂದು ಸೇನಾಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.
ಇನ್ನು ಜೂನಿಯರ್ ಕಮಿಷನಡ್ ಅಧಿಕಾರಿಗಳು (ಜೆಸಿಒ) ಸೇರಿದಂತೆ ಸುಮಾರು ಒಂದು ಲಕ್ಷ ಮಂದಿಗೆ ಎಂಎಸ್‌ಪಿ ಬೇಡಿಕೆ ಇರಿಸಲಾಗಿತ್ತು. ಹಣಕಾಸು ಸಚಿವಾಲಯವು ಸೇನೆಯ ಬೇಡಿಕೆಯನ್ನು ತಿರಸ್ಕರಿಸಿರುವುದು ಸೇನೆಯಲ್ಲಿ ಅಸಮಾಧಾನ ಮೂಡಿಸಿದೆ. 87,646 ಜೆಸಿಒಗಳು ಮತ್ತು ನೌಕಾಪಡೆ ಮತ್ತು ಸೇನಾ ಪಡೆಯ 25,434 ಸೈನಿಕರು ಈ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೆಸಿಒ ಮತ್ತು ನೌಕಾ ಪಡೆ ಹಾಗೂ ಭಾರತೀಯ ಶಸ್ತ್ರ ಪಡೆಗಳಲ್ಲಿನ ಸಮಾನಾಂತರ ಶ್ರೇಣಿಯವರಿಗೆ ಅಧಿಕ ಎಂಎಸ್‌ಪಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಪ್ರಸ್ತುತ ಎಂಎಸ್‌ಪಿ ಎರಡು ಹಂತಗಳಲ್ಲಿದ್ದು, ಒಂದು ಅಧಿಕಾರಿಗಳಿಗೆ ಹಾಗೂ ಇನ್ನೊಂದು ಜೆಸಿಒ ಮತ್ತು ಯೋಧರಿಗೆ ಮೀಸಲಾಗಿವೆ.
ಇದೀಗ ಸೇನೆಯ ಅಸಮಾಧಾನ ಬೆನ್ನಲ್ಲೇ ಈ ಬಗ್ಗೆ ಚುಟುಕು ಪ್ರತಿಕ್ರಿಯೆ ನೀಡಿರುವ ಹಣಕಾಸು ಸಚಿವಾಲಯ ಸೇನೆ ಮರುಪರಿಶೀಲನಾ ಬೇಡಿಕೆಯನ್ನು ಪರಿಶೀಲಿಸುವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com