ನಾಳೆ ಬಿಜೆಪಿ ರಥಯಾತ್ರೆ ಕುರಿತ ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು!

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಉದ್ದೇಶಿತ ರಥ ಯಾತ್ರೆಗೆ ಅನುಮತಿ ನೀಡುವ ಕುರಿತ ಅರ್ಜಿ ವಿಚಾರಣೆಗೆ ಕೋಲ್ಕತಾ ಹೈಕೋರ್ಟ್ ಅಸ್ತು ಎಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಉದ್ದೇಶಿತ ರಥ ಯಾತ್ರೆಗೆ ಅನುಮತಿ ನೀಡುವ ಕುರಿತ ಅರ್ಜಿ ವಿಚಾರಣೆಗೆ ಕೋಲ್ಕತಾ ಹೈಕೋರ್ಟ್ ಅಸ್ತು ಎಂದಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿರುವ ಉದ್ದೇಶಿತ ರಥಯಾತ್ರೆಗೆ ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದ ಬೆನ್ನಲ್ಲೇ ಬಿಜೆಪಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ರಥಯಾತ್ರೆಯಿಂದಾಗಿ ಕೋಮು ಸಾಮರಸ್ಯ ಹಾಳಾಗುತ್ತದೆ ಎಂಬ ಪಶ್ಚಿಮ ಬಂಗಾಳ ಸರ್ಕಾರದ ವಾದಕ್ಕೆ ಮನ್ನಣೆ ನೀಡಿದ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು. 
ಇದೀಗ ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಪರ ವಕೀಲರು ಮಾಡಿದ ಮೇಲ್ಮನವಿಗೆ ಮನ್ನಣೆ ನೀಡಿರುವ ಕೋಲ್ಕತಾ ಹೈಕೋರ್ಟ್ ನಾಳೆ ಈ ಕುರಿತ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ಇದಕ್ಕೂ ಮೊದಲು ಮಮತಾ ಬ್ಯಾನರ್ಜಿ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ರಥ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಕೋರ್ಟ್ ಮೊರೆ ಹೋಗಿತ್ತು. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕಿಶೋರ್ ದತ್ತಾ ಅವರು, ಕೋಮುಗಲಭೆ ಭೀತಿ ಹಿನ್ನೆಲೆಯಲ್ಲಿ ನಾಳೆಯಿಂದ ಆರಂಭವಾಗಬೇಕಿದ್ದ ಬಿಜೆಪಿ ಅಧ್ಯಕ್ಷರ ರಥಯಾತ್ರೆಗೆ ಅನುಮತಿ ನೀಡಲು ಕೂಚ್ ಬೆಹರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರಾಕರಿಸಿದ್ದಾರೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದ್ದರು.
ರಥ ಯಾತ್ರೆಯಿಂದ ಕೋಮುಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ದತ್ತಾ ಸಮರ್ಥಿಸಿಕೊಂಡಿದ್ದರು. ಆದರೆ ಇದಕ್ಕೆ ಬಿಜೆಪಿ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಾಧೀಶರು, ಅಹಿತಕರ ಘಟನೆ ನಡೆದರೆ ಯಾರು ಜಾವಾಬ್ದಾರರು ಎಂದು ಬಿಜೆಪಿ ಪರ ವಕೀಲ ಅನಿದ್ಯಾ ಮಿತ್ರಾ ಅವರಿಗೆ ಪ್ರಶ್ನಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಮಿತ್ರ ಉತ್ತರಿಸಿದರು.
ವಾದ - ಪ್ರತಿವಾದ ಆಲಿಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ರಥ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದೆ. ಆದರೆ ಬಿಜೆಪಿ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ವಿಭಾಗೀಯ ಪೀಠದ ಮೊರೆ ಹೋಗಲು ನಿರ್ಧರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com