ಚೆನ್ನೈ: ನಾವು ಯಾವುದೇ ಮಾತುಕತೆ ನಡೆಸುವುದಿಲ್ಲ. ಮೊದಲು ಮೇಕೆದಾಟು ಅಣೆಕಟ್ಟು ಯೋಜನೆ ಕೈಬಿಡಿ ಎಂದು ತಮಿಳುನಾಡು ಸರ್ಕಾರ ಸೋಮವಾರ ಕರ್ನಾಟಕಕ್ಕೆ ಸ್ಪಷ್ಟಪಡಿಸಿದೆ.
ಈ ಸಂಬಂಧ ಇತ್ತೀಚಿಗಷ್ಟೇ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ಅವರಿಗೆ ಬರೆದ ಪತ್ರಕ್ಕೆ ಉತ್ತರಿಸಿದ ತಮಿಳುನಾಡು ಕಾನೂನು ಸಚಿವ ಸಿವಿ ಶಣ್ಮುಗಂ ಅವರು, ಮೇಕೆದಾಟು ವಿಚಾರ ಕುರಿತು ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ.
ಪ್ರಕರಣ ಈಗ ಸುಪ್ರೀಂ ಕೋರ್ಟ್ ನಲ್ಲಿದ್ದು, ಕಾವೇರಿ ನದಿಗೆ ಹೊಸದಾಗಿ ಮತ್ತೊಂದು ಅಣೆಕಟ್ಟು ಕಟ್ಟುವುದು ಕಾವೇರಿ ನದಿ ನೀರು ಹಂಚಿಕೆ ಕುರಿತ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ.
ಮೇಕೆದಾಟು ಯೋಜನೆ ಕುರಿತು ಚರ್ಚೆಗೆ ಬನ್ನಿ ಎಂದು ಡಿಕೆ ಶಿವಕುಮಾರ್ ಅವರು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಡಿಕೆಶಿ ಮನವಿ ತಿರಸ್ಕರಿಸಿರುವ ತಮಿಳುನಾಡು, ಮಾತುಕತೆ ನಡೆಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಶಣ್ಮುಗಂ ಅವರು ತಿಳಿಸಿದ್ದಾರೆ.
ಮೇಕೆದಾಟು ಅಣೆಕಟ್ಟಿಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿದ್ದು, ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.