ರಾಜಸ್ಥಾನ: ಬಿಜೆಪಿ ಸೋಲಿಗೆ ಮುಹೂರ್ತ ಇಟ್ಟಿತ್ತು 'ಡಿಜಿಟಲ್ ಗಡಿಯಾರ'

ಪ್ರಬಲ ಅಭ್ಯರ್ಥಿಗಳಿಲ್ಲ, ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ. ಆದರೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ 'ಕೈ' ಕಮಾಲ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಸಾಧನೆಗೆ ಒಂದು ಡಿಜಿಟಲ್ ಗಡಿಯಾರ ಕಾರಣವಂತೆ..
ಕಾಂಗ್ರೆಸ್ ಕಚೇರಿಯಲ್ಲಿರುವ ಡಿಜಿಟಲ್ ಗಡಿಯಾರ
ಕಾಂಗ್ರೆಸ್ ಕಚೇರಿಯಲ್ಲಿರುವ ಡಿಜಿಟಲ್ ಗಡಿಯಾರ
ಜೈಪುರ: ಸ್ಥಳೀಯ ಸ್ಟಾರ್ ಪ್ರಚಾರಕರಿಲ್ಲ, ಮುಖ್ಯಮಂತ್ರಿ ಅಭ್ಯರ್ಥಿ ಕೂಡ ಇಲ್ಲ. ಆದರೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ 'ಕೈ' ಕಮಾಲ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಸಾಧನೆಗೆ ಒಂದು ಡಿಜಿಟಲ್ ಗಡಿಯಾರ ಕಾರಣವಂತೆ..
ಹೌದು.. ನಿನ್ನೆ ಪ್ರಕಟವಾದ ರಾಜಸ್ಥಾನ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಸಿಎಂ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರವನ್ನು ಮಣಿಸಿದ್ದು. ದಶಕದ ಬಳಿಕ ರಾಜಸ್ತಾನದಲ್ಲಿ ಹಸ್ತದ ಬಾವುಟ ಹಾರಾಡುತ್ತಿದೆ. ರಾಜಸ್ತಾನದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದಲೂ ಈ ವರೆಗೂ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಯೇ ಇರಲಿಲ್ಲ. ಇದು ಸಹಜವಾಗಿಯೇ ಕಾರ್ಯಕರ್ತರಲ್ಲಿ ಕೊಂಚ ಆತಂಕಕ್ಕೆ ಕಾರಣವಾಗಿತ್ತು. ಸಾರಥಿಯೇ ಇಲ್ಲದೇ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಇದಾಗ್ಯೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕೈ ಪಡೆ ಕಮಾಲ್ ಮಾಡಿದ್ದು, ಒಟ್ಟು 199 ಕ್ಷೇತ್ರಗಳ ಪೈಕಿ 99 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಸರಳ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತಿದೆ. ಆದರೆ ಕೈ ಪಡೆಯ ಈ ಅಭೂತಪೂರ್ವ ಸಾಧನೆಗೆ ಸ್ಪೂರ್ತಿಯಾಗಿದ್ದು ಒಂದು ಡಿಜಿಟಲ್ ಗಡಿಯಾರವಂತೆ..
ಅಚ್ಚರಿಯಾದರೂ ಇದು ನಿಜ. ಪತ್ರಿಕೆಯೊಂದರ ವರದಿಯನ್ವಯ ಕಳೆದ ಒಂದು ವರ್ಷದ ಹಿಂದೆ ಅಂದರೆ ವಸುಂಧರ ರಾಜೆ ಅವರ ಸರ್ಕಾರ 4 ವರ್ಷ ಪೂರೈಸಿದ ಸಂದರ್ಭದಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸಲು ರಾಜಸ್ತಾನ ಕಾಂಗ್ರೆಸ್ ಕಚೇರಿಯಲ್ಲಿ ಡಿಜಿಟಲ್ ಗಡಿಯಾರನ್ನು ಅಳವಡಿಸಲಾಗಿತ್ತಂತೆ. ಇದು ಸಮಯ ಹೇಳುವ ಗಡಿಯಾರವಲ್ಲ. ಬದಲಿಗೆ ಕೌಂಟ್ ಡೌನ್ ಗಡಿಯಾರವಾಗಿದ್ದು, ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಸರ್ಕಾರವನ್ನು ಸೋಲಿಸುವ ಕುರಿತು ಕಾಂಗ್ರೆಸ್ ಹೈಕಮಾಂಡ್ ನೀಡಿದ್ದ ನೀಡಲಾಗಿದ್ದ ಡೆಡ್ ಲೈನ್ ಸೂಚಿಸುವ ಗಡಿಯಾರವಾಗಿತ್ತು. ಗಡಿಯಾರದ ಮೇಲ್ಭಾಗದಲ್ಲಿ ಜನತೆಯ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದೇ ನಮ್ಮ ಗುರಿ ಎಂಬರ್ಥದ ಬರಹ ಕೂಡ ಹಾಕಲಾಗಿತ್ತು. 
ಇದು ಪ್ರತಿನಿತ್ಯ ಕಚೇರಿಗೆ ಬರುವ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಹೆಚ್ಚು ಕೆಲಸ ಮಾಡಲು ಸ್ಪೂರ್ತಿ ನೀಡುತ್ತಿತ್ತು ಎನ್ನಲಾಗಿದೆ. ಅಲ್ಲದೆ ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ನಾಯಕರೂ ಹಾಗೂ ಕಾರ್ಯಕರ್ತರು ಜನರಿಗೆ ಹತ್ತಿರವಾಗಲು ಇದು ಸಹಕಾರಿಯಾಗಿತ್ತು. ಗಡಿಯಾರದ ಸ್ಪೂರ್ತಿಯಿಂದಲೇ ನಾವು ಮನೆ ಮನೆಗೂ ತೆರಳಿ ಪ್ರಚಾರ ಮಾಡಿದೆವು ಎಂದು ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com