ಸಂಗ್ರಹ ಚಿತ್ರ
ದೇಶ
ತಮಿಳುನಾಡು ಸರ್ಕಾರಕ್ಕೆ ಹಿನ್ನಡೆ: ಸ್ಟರ್ಲೈಟ್ ಕಾರ್ಖಾನೆ ಪುನಾರಂಭಕ್ಕೆ ಎನ್‌ಜಿಟಿ ಆದೇಶ
ಸರ್ಕಾರದ ಆದೇಶದ ಬಳಿಕ ಮುಚ್ಚಿಹೋಗಿದ್ದ ತಮಿಳುನಾಡಿನ ವೇದಾಂತ ಕಾಪರ್ ಸ್ಟರ್ಲೈಟ್ ಘಟಕವನ್ನು ಮತ್ತೆ ಆರಂಭ ಮಾಡಲು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ಆದೇಶ ನೀಡಿದೆ.
ನವದೆಹಲಿ: ಸರ್ಕಾರದ ಆದೇಶದ ಬಳಿಕ ಮುಚ್ಚಿಹೋಗಿದ್ದ ತಮಿಳುನಾಡಿನ ವೇದಾಂತ ಕಾಪರ್ ಸ್ಟರ್ಲೈಟ್ ಘಟಕವನ್ನು ಮತ್ತೆ ಆರಂಭ ಮಾಡಲು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ಆದೇಶ ನೀಡಿದೆ.
ತೂತುಕುಡಿಯಲ್ಲಿರುವ ವೇದಾಂತ ಕಾಪರ್ ಸ್ಟರ್ಲೈಟ್ ಘಟಕದಿಂದ ಪರಿಸರ ನಾಶವಾಗುತ್ತಿದೆ ಎಂಬ ಆಪಾದನೆ ಸಂಬಂಧ ತನಿಖೆ ನಡೆಸಿದ ಮೂರು ಮಂದಿಯ ಸಮಿತಿ ನೀಡಿದ್ದ ವರದಿಯನ್ನಾಧರಿಸಿ ನ್ಯಾಯಾಧಿಕರಣ ಈ ಮಹತ್ವದ ತೀರ್ಪು ನೀಡಿದೆ.
ಮೇಘಾಲಯ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ತರುಣ್ ಅಗರ್ವಾಲ್ ನೇತೃತ್ವದ ಸಮಿತಿ ಕಾಪರ್ ಸ್ಟರ್ಲೈಟ್ ಘಟಕಕ್ಕೆ ಬೀಗ ಮುದ್ರೆ ಜಡಿಯುವ ಮುನ್ನ ಯಾವುದೇ ರೀತಿಯ ಕಾನೂನು ಪಾಲನೆಯಾಗಿಲ್ಲ ಎಂದು ವರದಿ ನೀಡಿತ್ತು. ಈ ಬಗ್ಗೆ ಮಾತನಾಡಿರುವ ಸಮಿತಿಯ ಮುಖ್ಯಸ್ಥರಾದ ನ್ಯಾಯಾಧೀಶ ತರುಣ್ ಅಗರ್ವಾಲ್ ಅವರು, 'ಘಟಕವನ್ನು ಮುಚ್ಚುವ ಮುನ್ನ ಯಾವುದೇ ನೊಟಿಸ್ ಅಥವಾ ಮೆಲ್ಮನವಿಯ ಅವಕಾಶವನ್ನು ವೇದಾಂತ ಸಮೂಹಕ್ಕೆ ನೀಡಲಿಲ್ಲ. ಈ ಮೂಲಕ ನ್ಯಾಯಾಂಗದ ನಿಯಮಾವಳಿಗಳನ್ನೇ ಗಾಳಿಗೆ ತೂರಲಾಗಿದೆ. ಕೆಲ ನಿಯಮಾವಳಿಗಳ ಉಲ್ಲಂಘನೆ ಕಂಡುಬಂದಿದ್ದರೂ, ಘಟಕವನ್ನು ಮುಚ್ಚಲು ನೀಡಿರುವ ಕಾರಣಗಳು ಅಷ್ಟು ಸಮಂಜಸವಾಗಿಲ್ಲ ಎಂದು ಹೇಳಿದ್ದಾರೆ.


