ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ಮೋದಿ ವಿಶ್ರಮಿಸಲು ಬಿಡುವುದಿಲ್ಲ: ರಾಹುಲ್ ಗಾಂಧಿ

ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ರಾಂತಿ ಪಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ...
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ರಾಂತಿ ಪಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ. 
ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದಲ್ಲಿ ರೈತರ ಸಾಲ ಮನ್ನಾ ಮಾಡಿರುವ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 
ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ಮೋದಿಯವರನ್ನು ಮಲಗಲು ಬಿಡುವುದಿಲ್ಲ. ರೈತರ ಸಾಲ ಮನ್ನಾ ಮಾಡುವಂತೆ ಸರ್ವ ಪಕ್ಷಗಳೂ ಒಗ್ಗೂಡಿ ಆಗ್ರಹ ಮಾಡಲಿವೆ. ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಧಾನಮಂತ್ರಿಗಳು ರೈತರ ಒಂದು ಪೈಸೆಯನ್ನೂ ಮನ್ನಾ ಮಾಡಿಲ್ಲ ಎಂದು ಹೇಳಿದ್ದಾರೆ. 
ರಫೇಲ್ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸದಿರುವುದು, ರೈತರ ಸಾಲ ಮನ್ನಾ ಮಾಡದಿರುವುದು, ನೋಟು ನಿಷೇಧದಂತಹ ತಪ್ಪುಗಳನ್ನು ಸರ್ಕಾರ ಮಾಡಿದೆ. ಜನರಿಗೆ ಸಾಕಷ್ಟು ಸುಳ್ಳುಗಳನ್ನೂ ಹೇಳಿದೆ. ರೈತರು, ಸಣ್ಣ ವ್ಯಾಪಾರಿಗಳನ್ನು ಲೋಟಿ ಮಾಡಿದೆ. ನೋಟು ನಿಷೇಧದ ಮೂಲಕ ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ಹಗರಣವನ್ನು ಸರ್ಕಾರ ಮಾಡಿದೆ. 
1984ರ ಸಿಖ್ ವಿರೋಧಿ ಕಲಭೆಯಲ್ಲಿ ಸಜ್ಜನ್ ಕುಮಾರ್ ದೋಷಿಯಾಗಿದ್ದಾರೆ. ಈ ಪ್ರಕರಣದ ಬಗ್ಗೆ ನಾನು ಈಗಾಗಲೇ ಸ್ಪಷ್ಟನೆಗಳನ್ನೂ ನೀಡಿದ್ದೇನೆ. ಪ್ರಸ್ತುತದ ಸುದ್ದಿಗೋಷ್ಠಿ ದೇಶದ ರೈತರಿಗೆ ಸಂಬಂಧಿಸಿದ್ದು. ರೈತರ 1 ಪೈಸೆಯನ್ನೂ ಮನ್ನಾ ಮಾಡುವುದಿಲ್ಲ ಎಂದು ಮೋದಿಯವರು ಹೇಳಿದ್ದಾರೆಂದು ತಿಳಿಸಿದ್ದಾರೆ. 
ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಧಾನಿ ಮೋದಿ ಸರ್ಕಾರ ಒಂದು ನಯಾ ಪೈಸೆ ಕೂಡ ರೈತರ ಸಾಲವನ್ನು ಮನ್ನಾ ಮಾಡಿಲ್ಲ. ಚುನಾವಣಾ ಪ್ರಚಾರದ ವೇಳೆ ನಾವು ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೆವು. ಅಧಿಕಾರಕ್ಕೆ ಬಂದ 6 ಗಂಟೆಗಳಲ್ಲಿ ಎರಡು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಶೀಘ್ರದಲ್ಲಿಯೇ ರಾಜಸ್ಥಾನದಲ್ಲಿಯೂ ರೈತರ ಸಾಲ ಮನ್ನಾ ಮಾಡಲಾಗುತ್ತದೆ. ಸರ್ಕಾರಕ್ಕೆ ರೈತರ ಧ್ವನಿ ಕೇಳುವಂತೆ ನಮ್ಮ ಪಕ್ಷ ಮಾಡುತ್ತದೆ. ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ಮೋದಿ ವಿಶ್ರಮಿಸಲು ನಾವು ಬಿಡುವುದಿಲ್ಲ. 
2019ರ ಕಾಂಗ್ರೆಸ್ ಪ್ರಣಾಳಿಕೆ ರೈತರ ಸಾಲಮನ್ನಾ ಕುರಿತಂತಾಗಿರಲಿದೆ. ಶೇ.100 ರಷ್ಟು ಹೇಳುತ್ತೇನೆ. ಮೋದಿ ರೈತರ ಸಾಲ ಮನ್ನಾ ಮಾಡದಿದ್ದರೆ, ಇಂದಿನ ಫಲಿತಾಂಶ 2019ರ ಲೋಕಸಭೆಯಲ್ಲಿ ಮರುಕಳಿಸಲಿದೆ. 
ರಫೇಲ್ ಯುದ್ಧ ವಿಮಾನ ಖರೀದಿ ಕುರಿತಂತೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವಂತೆ ನಾವು ಆಗ್ರಹಿಸಿದ್ದೆವು. ಈ ವೇಳೆ ಮೋದಿಯವರು ಈ ಬಗ್ಗೆ ಚರ್ಚೆಗೆ ಒಪ್ಪಿದ್ದರು. ಆದರೀಗ ಚರ್ಚೆಗೆ ಬರದೆ ಓಡಿಹೋಗುತ್ತಿದ್ದಾರೆ. 
ನೋಟು ನಿಷೇಧ ದೇಶದ ಇತಿಹಾಸದಲ್ಲಿಯೇ ಅತೀದೊಡ್ಡ ಹಗರಣ. ನೋಟು ನಿಷೇಧ ಹಾಗೂ ಸಾಲಮನ್ನಾ ಎಂಬ ಎರಡು ಆಯ್ಕೆಗಳನ್ನು ಇಟ್ಟುಕೊಂಡಿದ್ದ ಪ್ರಧಾನಮಂತ್ರಿಗಳು, ರೈತರನ್ನು ಆಯ್ಕೆ ಮಾಡಿಕೊಂಡು ಹಣವನ್ನೆಲ್ಲಾ ತಮ್ಮ ಶ್ರೀಮಂತ ಸ್ನೇಹಿತರಿಗೆ ನೀಡಿದ್ದಾರೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com