ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

'ಆಂಜನೇಯ ದಲಿತನೂ ಅಲ್ಲ, ಮುಸ್ಲಿಮನೂ ಅಲ್ಲ.. ಆತ ಜಾಟ್ ಸಮುದಾಯಕ್ಕೆ ಸೇರಿದವನು'

ಶ್ರೀರಾಮ ಧೂತ ಆಂಜನೇಯ ದಲಿತನೂ ಅಲ್ಲ, ಮುಸ್ಲಿಮನೂ ಅಲ್ಲ.. ಆತ ಜಾಟ್ ಸಮುದಾಯಕ್ಕೆ ಸೇರಿದವನು ಎಂದು ಉತ್ತರ ಪ್ರದೇಶದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಲಖನೌ: ಶ್ರೀರಾಮ ಧೂತ ಆಂಜನೇಯ ದಲಿತನೂ ಅಲ್ಲ, ಮುಸ್ಲಿಮನೂ ಅಲ್ಲ.. ಆತ ಜಾಟ್ ಸಮುದಾಯಕ್ಕೆ ಸೇರಿದವನು ಎಂದು ಉತ್ತರ ಪ್ರದೇಶದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಹಮನುಮಂತ ದಲಿತ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಹನುಮಂತನ ಜಾತಿ ಮತ್ತು ಧರ್ಮದ ಬಗ್ಗೆ ಹೇಳಿಕೆಗಳ ಸರಣಿ ಮುಂದುವರೆದಿದ್ದು, ಈ ಸರಣಿಗೆ ಇದೀಗ ಉತ್ತರ ಪ್ರದೇಶದ ಧಾರ್ಮಿಕ ವ್ಯವಹಾರಗಳ ಸಚಿವ ಲಕ್ಷ್ಮಿ ನಾರಾಯಣ್ ಚೌದರಿ ಕೂಡ ಸೇರ್ಪಡೆಯಾಗಿದ್ದು, ಹನುಮಂತ ಜಾಟ್ ಸಮುದಾಯಕ್ಕೆ ಸೇರಿದವನು ಎಂದು ಹೇಳುವ ಮೂಲಕ ಹೊಸದೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಆಂಜನೇಯ ತಮ್ಮ ಜಾಟ್ ಸಮುದಾಯಕ್ಕೆ ಸೇರಿದವರಾಗಿರಬೇಕು. ಏಕೆಂದರೆ ಯಾರಾದರೂ ಸಮಸ್ಯೆಯಲ್ಲಿದ್ದರೆ ಹಿಂದೆ ಮುಂದೆ ಯೋಚನೆ ಮಾಡದೇ ಜಾಟ್ ಸಮುದಾಯದವರು ಅಕಾಡಕ್ಕೆ ಇಳಿದು ನೆರವು ನೀಡುತ್ತಾರೆ. ಅಂತೆಯೇ ಹನುಮಂತ ಕೂಡ ರಾಮನ ಪತ್ನಿಯನ್ನು ರಾವಣ ಅಪಹರಿಸಿದ್ದಾಗ ಹಿಂದೆ ಮುಂದೆ ಯೋಚನೆ ಮಾಡದೇ ಸಮುದ್ರದ ಮೇಲೆ ಹಾರಿದ್ದ. ರಾಮಾಯಣದಲ್ಲಿ ಮತ್ತು ಹಿಂದೂ ಪುರಾಣಗಳಲ್ಲಿ ಇಂತಹ ಹಲವು ನಿದರ್ಶನಗಳಿವೆ. ಹೀಗಾಗಿ ಹನುಮಂತನ ಗುಣ ಜಾಟ್ ಸಮುದಾಯಕ್ಕೆ ಹತ್ತಿರವಾಗಿದ್ದು, ಇದೇ ಕಾರಣಕ್ಕೆ ಅವರು ಜಾಟ್ ಸಮುದಾಯಕ್ಕೆ ಸೇರಿದವರಾಗಿರಬೇಕು ಎಂದು ಹೇಳಿದ್ದಾರೆ.
'ಹನುಮಾನ್ ಮುಸ್ಲಿಮನಾಗಿದ್ದ' ಎಂದ ಬಿಜೆಪಿ ಎಂಎಲ್​ಸಿ
ಇತ್ತ ಇದೇ ಉತ್ತರ ಪ್ರದೇಶದ ಮತ್ತೋರ್ವ ಬಿಜೆಪಿ ಮುಖಂಡ ಬಕ್ಕಲ್​ ನವಾಬ್ ಅವರು 'ಹನುಮಾನ್ ಮುಸ್ಲಿಮನಾಗಿದ್ದ' ಎಂದು ಹೇಳಿಕೆ ನೀಡಿದ್ದಾರೆ.  ಸಮಾಜವಾದಿ ಪಕ್ಷ ತೊರೆದು ಕಮಲಪಾಳಯ ಸೇರಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಬುಕ್ಕಾಲ್​ ನವಾಬ್ ನಿನ್ನೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಹಿಂದು ದೇವರಾದ ಹನುಮಾನ್​ ಎಲ್ಲರಿಗೂ ಸೇರಿದವನು. ಬಹಳಷ್ಟು ಮುಸ್ಲಿಮರ ಹೆಸರುಗಳು ಹನುಮಾನ್​ ಎಂಬ ಹೆಸರಿಗೆ ಹೋಲಿಕೆಯಾಗುತ್ತವೆ. ಹಾಗಾಗಿ, ಹನುಮಾನ್​ ಮುಸ್ಲಿಂ ಆಗಿದ್ದ ಎಂಬುದು ನನ್ನ ಅಭಿಪ್ರಾಯ ಎಂದು ಹೇಳುವ ಮೂಲಕ ಮತ್ತೆ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದ್ದಾರೆ. ರೆಹಮಾನ್, ರಂಜಾನ್, ಪರ್ಮಾನ್, ಜೀಶಾನ್, ಕುರ್ಬಾನ್​ ಈ ಹೆಸರುಗಳ ರೀತಿಯಲ್ಲೇ ಹನುಮಾನ್​ ಎಂಬ ಹೆಸರು ಸಹ ಉಚ್ಛರಿಸಲ್ಪಡುತ್ತದೆ. ಈ ಹೆಸರು ಹನುಮಾನ್ ಪದದಿಂದಲೇ ಈ ಇಂತಹ ಹೆಸರುಗಳು ಉತ್ಪತ್ತಿಯಾಗಿವೆ. ಇಂತಹ ಹೆಸರುಗಳು ಬೇರೆ ಎಲ್ಲೂ ಇಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
64 ವರ್ಷದ ಬಕ್ಕಲ್ ನವಾಬ್ ಕಳೆದ ವರ್ಷ ಎಲ್ಲರೆದುರು ಹನುಮಾನ್​ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದರು. ಇತ್ತೀಚೆಗೆ ರಾಮನ ವಿಚಾರದ ಜೊತೆಗೆ ಹನುಮಾನ್​ ವಿಚಾರವನ್ನೂ ಬಿಜೆಪಿ ಪ್ರಸ್ತಾಪಿಸತೊಡಗಿತ್ತು. ಒಂದು ವರ್ಷದಿಂದ ಆಂಜನೇಯನ ಹಿನ್ನೆಲೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಬಿಜೆಪಿ ಪಕ್ಷದ ನಾಯಕ ಯೋಗಿ ಆದಿತ್ಯನಾಥ ಚುನಾವಣಾ ಪ್ರಚಾರದ ವೇಳೆ ಹನುಮಾನ್​ ಓರ್ವ ದಲಿತ ಎಂದು ಹೇಳಿದ್ದರು. ಇದಕ್ಕೆ ವಿರೋಧಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಅವರದೇ ಪಕ್ಷದ ಮತ್ತೋರ್ವ ನಾಯಕ ಹನುಮಾನ್​ ಮುಸ್ಲಿಂ ಎಂದು ಹೇಳಿರುವುದರಿಂದ ಬಿಜೆಪಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com