ವಿವಿಐಪಿ ಕಾಪ್ಟರ್ ಹಗರಣದಲ್ಲಿ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪಿಸಿದ ಮೈಕೆಲ್: ದೆಹಲಿ ಕೋರ್ಟ್ ಗೆ ಇಡಿ

ಬಹುಕೋಟಿ ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಕ್ಯಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ....
ಕ್ರಿಶ್ಚಿಯನ್ ಮೈಕೆಲ್
ಕ್ರಿಶ್ಚಿಯನ್ ಮೈಕೆಲ್
ನವದೆಹಲಿ: ಬಹುಕೋಟಿ ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಕ್ಯಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿರುವುದಾಗಿ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಗೆ ತಿಳಿಸಿದೆ.
ಸದ್ಯ ಇಡಿ ವಶದಲ್ಲಿರುವ ಮೈಕೆಲ್, ಆಗಸ್ಟಾ ವೆಸ್ಟ್ ಲ್ಯಾಂಡ್ ಕ್ಯಾಪ್ಟರ್ ಖರೀದಿ ಒಪ್ಪಂದದಿಂದ ಎಚ್ಎಎಲ್ ಅನ್ನು ಕೈಬಿಟ್ಟಿದ್ದು ಹೇಗೆ ಮತ್ತು ಟಾಟಾಗೆ ಆಹ್ವಾನ ನೀಡಿದ ವಿಚಾರವನ್ನು ಬಾಯಿಬಿಟ್ಟಿರುವುದಾಗಿ ಇಡಿ ಅಧಿಕಾರಿಗಳು ಕೋರ್ಟ್ ಗೆ ತಿಳಿಸಿದ್ದಾರೆ.
ವಿಚಾರಣೆ ವೇಳೆ ಕ್ರಿಶ್ಚಿಯನ್ ಮೈಕೆಲ್, ದೊಡ್ಡ ವ್ಯಕ್ತಿ ಹಾಗೂ ಆರ್ ಹೆಸರಿನ(ರಾಹುಲ್ ಗಾಂಧಿ) ವ್ಯಕ್ತಿ ಎಂದು ಹೇಳಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಮಾಹಿತಿ ನೀಡಿದೆ.
ಮೈಕೆಲ್ ತನಗೆ ಹೊರಗಿನಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಅವರ ವಕೀಲರ ಪ್ರವೇಶವನ್ನು ನಿಷೇಧಿಸಬೇಕು ಎಂದು ಇಡಿ ಅಧಿಕಾರಿಗಳು ಕೋರ್ಟ್ ಗೆ ಮನವಿ ಮಾಡಿದ್ದಾರೆ. 
ದೆಹಲಿ ಕೋರ್ಟ್ ಡಿಸೆಂಬರ್ 22ರಂದು ಆರೋಪಿ ಮೈಕೆಲ್ ನನ್ನು ಏಳು ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿತ್ತು. ಏಳು ದಿನಗಳ ಅವಧಿ ಇಂದು ಅಂತ್ಯಗೊಂಡಿದ್ದು, ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
12 ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್​ಪಿ ತ್ಯಾಗಿ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್​ ಶೀಟ್ ಸಲ್ಲಿಸಿದ್ದು, ಈ ಒಪ್ಪಂದದಿಂದ ಸರ್ಕಾರದ ಖಜಾನೆಗೆ 3,600 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದೆ.
ಈ ಒಪ್ಪಂದವು ಸಾಕಾರಗೊಳ್ಳಲು ನೆರವಾಗುವ ಕಾರ್ಯಕ್ಕೆ ಅಗಸ್ಟವೆಸ್ಟ್​ಲ್ಯಾಂಡ್ ಸಂಸ್ಥೆಯಿಂದ ಕ್ರಿಶ್ಚಿಯನ್ ಮೈಕೆಲ್​ ಸುಮಾರು 225 ಕೋಟಿ ರು. ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com