ಥಾಣೆ: ಮಹಿಳೆ ಸೇರಿದಂತೆ ಮೂವರಿಂದ ಮರ್ಮಾಂಗ ಕತ್ತರಿಸಿಕೊಂಡು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ವರ್ಷದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಗೃಹ ಸಾಲ ಸಲಹೆಗಾರನಾಗಿದ್ದ ತುಶಾರ್ ಪೂಜಾರ್ ಎಂಬ ಯುವಕ, 42 ವರ್ಷದ ಮಹಿಳೆಗೆ ಕಿರುಕು ನೀಡಿದ ಆರೋಪದ ಹಿನ್ನೆಲೆಯಲ್ಲಿ ಕಳೆದ ವಾರ ಮಹಿಳೆ ಹಾಗೂ ಇತರೆ ಇಬ್ಬರು ಯುವಕರು ಸೇರಿ ಆತನ ಮೇಲೆ ಹಲ್ಲೆ ನಡೆಸಿ, ಮರ್ಮಾಂಗ ಕತ್ತರಿಸಿದ್ದರು.
ಡೊಂಬಿವಲಿ ಪಶ್ಚಿಮ ನಿವಾಸಿಯಾಗಿದ್ದ ವಿವಾಹಿತ ಮಹಿಳೆಗೆ ಪಕ್ಕದ ಮನೆಯ ನಿವಾಸಿಯಾಗಿದ್ದ ತುಶಾರ್ ದೈಹಿಕ ಸಂಬಂಧ ಬೆಳೆಸುವಂತೆ ಪೀಡಿಸುತ್ತಿದ್ದ. ಅಲ್ಲದೆ ಯುವಕ ಕೆಲವು ವಾರಗಳ ಹಿಂದೆ ಮಹಿಳೆಯ ಪತಿಯನ್ನು ಭೇಟಿಯಾಗಿ ಆಕೆಯನ್ನು ಇಷ್ಟಪಡುತ್ತಿದ್ದೇನೆ ಎಂದು ಹೇಳಿದ್ದ. ಇದರಿಂದ ದಂಪತಿಯ ನಡುವೆ ಜಗಳ ಉಂಟಾಯಿತು. ಆಕ್ರೋಶಗೊಂಡ ಮಹಿಳೆ ಯುವಕನಿಗೆ ಪಾಠ ಕಲಿಸಲು ನಿರ್ಧರಿಸಿದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ, ತೇಜಸ್ ಮಾತ್ರೆ (22) ಮತ್ತು ಪ್ರವೀಣ್ ಕೆನಿಯಾ (25) ಎಂಬ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.