ಶಾಲಾ ಶುಲ್ಕ ಪಾವತಿಸದ್ದಕ್ಕೆ ಅವಮಾನ: ನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಪರೀಕ್ಷಾ ಶುಲ್ಕ ಪಾವತಿ ಮಾಡದ ಹಿನ್ನಲೆಯಲ್ಲಿ ಪರೀಕ್ಷೆ ಬರೆಯಲು ನಿರಾಕರಿಸಿ ಅವಮಾನಿಸಿದ್ದಕ್ಕೆ ತೀವ್ರವಾಗಿ ನೊಂದ 14 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ...
ಅಂತಿಮ ಸಂಸ್ಕಾರದ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವಿದ್ಯಾರ್ಥಿಗಳು
ಅಂತಿಮ ಸಂಸ್ಕಾರದ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವಿದ್ಯಾರ್ಥಿಗಳು
ಹೈದರಾಬಾದ್: ಪರೀಕ್ಷಾ ಶುಲ್ಕ ಪಾವತಿ ಮಾಡದ ಹಿನ್ನಲೆಯಲ್ಲಿ ಪರೀಕ್ಷೆ ಬರೆಯಲು ನಿರಾಕರಿಸಿ ಅವಮಾನಿಸಿದ್ದಕ್ಕೆ ತೀವ್ರವಾಗಿ ನೊಂದ 14 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ. 
ಸಾಯಿ ದೀಪ್ತಿ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ಮಲ್ಕಾಜ್ಗಿರಿಯಲ್ಲಿರುವ ಜ್ಯೋತಿ ಹೈ ಸ್ಕೂಲ್ ನಲ್ಲಿ ದೀಪ್ತಿ 9ನೇ ತರಗತಿ ಓದುತ್ತಿದ್ದಳು. ಈ ಹಿಂದೆ ಕೂಡ ಶಾಲಾ ಶುಲ್ಕ ಪಾವತಿ ಮಾಡದ ಹಿನ್ನಲೆಯಲ್ಲಿ ದೀಪ್ತಿಯನ್ನು ಅವಮಾನಿಸಲಾಗಿತ್ತು. ಇದೀಗ ಪರೀಕ್ಷಾ ಶುಲ್ಕ ರೂ.2,000 ಪಾವತಿಸಿದ ಹಿನ್ನಲೆಯಲ್ಲಿ ಪರೀಕ್ಷೆಗೆ ಕೂರಿಸದೆ ಅವಮಾನಿಸಲಾಗಿತ್ತು. ಈ ಎರಡೂ ಘಟನೆಗಳಿಂದ ತೀವ್ರವಾಗಿ ನೊಂದ ದೀಪ್ತಿ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ. 
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಕಾಯ್ದೆಯನ್ವಯ ಮಲ್ಕಾಜ್ಗಿರಿ ಪೊಲೀಸರು ಇದೀಗ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. 
ಪ್ರಕಱಣ ಸಂಬಂಧ ಹೇಳಇಕೆ ನೀಡಿರುವ ಪೊಲೀಸರು, ಶಿಕ್ಷಕ ಹಾಗೂ ಶಾಲಾ ಸಿಬ್ಬಂದಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಬಾಲಕಿಯ ಮೃತದೇಹವನ್ನು ತುಕರಾಮ್ ಗೇಟ್ ಬಳಿಯಿರುವ ಆಕೆಯ ಅಜ್ಜಿಯ ಮನೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. 
ಬಾಲಕಿಯ ತಂದೆ ಬಾಲಕೃಷ್ಣ ಅವರು ಮಾತನಾಡಿ, ಈ ರೀತಿಯ ಪರಿಸ್ಥಿತಿ ಯಾವ ತಂದೆಗೂ ಬರಬಾರದು. ವೃತ್ತಿಯಲ್ಲಿ ನಾನು ಪೇಂಟರ್ ಆಗಿದ್ದು, ದಿನಗೂಲಿ ಆಧಾರದ ಮೇಲೆ ಕೆಲಸವನ್ನು ಹುಡುಕುವುದರಲ್ಲಿ ಕಾರ್ಯನಿರತನಾಗಿರುತ್ತೇನೆ. ಶಾಲೆಯಲ್ಲಿ ಶುಲ್ಕ ಪಾವತಿಸುವ ಕಡೆಯ ದಿನಾಂಕ ಆಗಿ ಹೋಗಿದೆ ಎಂದು ಯಾವಾಗಲೂ ಹೇಳುತ್ತಿದ್ದಳು. ಬಳಿಕ ನಾವು ಶುಲ್ಕವನ್ನು ಪಾವತಿಸಿ, ಆಕೆಯನ್ನು ಶಾಲೆಗೆ ಕಳುಹಿಸುತ್ತಿದ್ದೆವು. ಇದು ಯಾವಾಗಲೂ ಆಗುತ್ತಿತ್ತು. ಟ್ಯೂಷೆನ್'ಗಾಗಿ ಪ್ರತೀ ತಿಂಗಳು ರೂ.800 ಕಟ್ಟುತ್ತೆವು. ಈ ಬಾರಿ ರೂ.2000 ಶುಲ್ಕವಾದ್ದರಿಂದ ಕಟ್ಟಲು ಸಾಧ್ಯವಾಗಿರಲಿಲ್ಲ. ಮನೆಯ ಎಲ್ಲಾ ವ್ಯವಹಾರಗಳನ್ನೂ ನನ್ನ ಪತ್ನಿಯೇ ನೋಡಿಕೊಳ್ಳುತ್ತಿದ್ದಳು ಎಂದು ಹೇಳಿದ್ದಾರೆ. 
ದೀಪ್ತಿ ಅತ್ಯಂತ ಚುರುಕಿನ ವಿದ್ಯಾರ್ಥಿನಿಯಾಗಿದ್ದಳು. ಅಲ್ಲದೆ, ಆಕೆ ಬಹಳ ಸೂಕ್ಷ್ಮ ಮನಃಸ್ಥಿತಿಯುಳ್ಳ ಬಾಲಕಿಯಾಗಿದ್ದಳು. ಆಕೆ ಇಂತಹ ದೊಡ್ಡ ನಿರ್ಣಯ ತೆಗೆದುಕೊಂಡಿರುವುದು ಆಘಾತವನ್ನು ತಂದಿದೆ ಎಂದು ತಿಳಿಸಿದ್ದಾರೆ. 
ಅಂತಿಮ ಸಂಸ್ಕಾರದ ವೇಳೆ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಶಾಲಾ ಮಂಡಳಿತ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿ ಸಂಘಟನೆಗಳು ದೀಪ್ತಿ ಅಂತಿಮ ಸಂಸ್ಕಾರದ ವೇಳೆ ಪ್ರತಿಭಟನೆ ನಡೆಸಲು ಆರಂಭಿಸಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಘಟನೆ ಬಳಿಕ ಹೇಳಿಕೆ ನೀಡಿರುವ ಬಾಲಕಿಯ ತಾಯಿ, ನನ್ನ ಮಗಳು ಹೋಗಿದ್ದಾಳೆ. ನಮಗೇನೂ ಬೇಡ...ಬಿಸಿಲು ತುಂಬಾ ಇದ್ದು, ಅಂತಿಮ ಸಂಸ್ಕಾರಕ್ಕೆ ಅನುವು ಮಾಡಿಕೊಡಿ. ನಮಗೇನು ಬೇಡ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com