'ನವ ಭಾರತ'ದ ಕನಸು ನನಸು ಮಾಡುವತ್ತ ಬಿಜೆಪಿ ಮುಂದೆ ಸಾಗುತ್ತಿದೆ: ಅಮಿತ್ ಶಾ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಅಡಿಯಲ್ಲಿ 'ನವ ಭಾರತ'ದ ಕನಸನ್ನು ನನಸು ಮಾಡುವತ್ತ ಬಿಜೆಪಿ ಮುಂದೆ ಸಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಹೇಳಿದ್ದಾರೆ...
ನವದೆಹಲಿ; ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಅಡಿಯಲ್ಲಿ 'ನವ ಭಾರತ'ದ ಕನಸನ್ನು ನನಸು ಮಾಡುವತ್ತ ಬಿಜೆಪಿ ಮುಂದೆ ಸಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಹೇಳಿದ್ದಾರೆ.
ದೀನ್ ದಯಾಳ್ ಉಪಾಧ್ಯಾಯ್ ಮಾರ್ಗದ ಬಳಿ ನಿರ್ಮಾಣ ಮಾಡಲಾಗಿರುವ ಬಿಜೆಪಿ ಪ್ರಧಾನಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಅಡಿಯಲ್ಲಿ ನವಭಾರತದ ಕನಸನ್ನು ನನಸು ಮಾಡುವತ್ತ 11 ಕೋಟಿ ಸದಸ್ಯರು ಮುಂದೆ ಸಾಗುತ್ತಿದ್ದಾರೆಂದು ಹೇಳಿದ್ದಾರೆ.
ಈ ದಿನ ಬಿಜೆಪಿಗೆ ಅತ್ಯಂತ ಮುಖ್ಯವಾದದ್ದು. ಪಕ್ಷದ ಲಕ್ಷಾಂತರ ಕಾರ್ಯಕರ್ತರ ಕನಸು ಇಂದು ನನಸಾಗುತ್ತಿದೆ. ಬಿಜೆಪಿ ಸ್ವಂತ ಕಚೇರಿಯನ್ನು ಹೊಂದಬೇಕೆಂದು ಪ್ರತೀಯೊಬ್ಬರು ಕನಸ್ಸನ್ನು ಇಟ್ಟುಕೊಂಡಿದ್ದರು. ಇದೀಗ ಕನಸಿನ ಕಟ್ಟಡವನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡುತ್ತಿದ್ದು, ನಮ್ಮ ಕನಸು ನನಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ತ್ರಿಪುರ ಹಾಗೂ ಕೇರಳ ರಾಜ್ಯಗಳಲ್ಲಿ ಪಕ್ಷದ ಕಾರ್ಯಕರ್ತರ ತ್ಯಾಗ ವ್ಯರ್ಥವಾಗದು. ತ್ರಿಪುರ, ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹಲವು ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ಆದರೂ, ಪಕ್ಷಕ್ಕಾಗಿ ನಮ್ಮ ಕಾರ್ಯ ಸ್ಥಗಿತಗೊಂಡಿಲ್ಲ. ಅವರ ತ್ಯಾಗ ಎಂದಿಗೂ ವ್ಯರ್ಥವಾಗದು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಷಾಲ್ ಅವರು ಹಾಜರಿದ್ದರು.